ಬೆಂಗಳೂರು: ಸಾಲ ಮಾಡಿಯೇ ಬಸ್ ಖರೀದಿ ಮಾಡಬೇಕಾಗುತ್ತದೆ. ಪ್ರತಿಬಾರಿಯೂ ಸಾಲ ಮಾಡಿಯೇ ಬಸ್ ಖರೀದಿಸೋದು. ನಂತರ ಸಾಲ ತೀರಿಸೋದು ಸಾಮಾನ್ಯ ಪ್ರಕ್ರಿಯೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೆಲ ಬಸ್‌ಗಳನ್ನು ಗುಜರಿಗೆ ಹಾಕಬೇಕಾಗುತ್ತದೆ. ಅವುಗಳನ್ನು ಗುಜರಿಗೆ ಹಾಕಿದ ಮೆಲೆ ಹೊಸ ಬಸ್ ಖರೀದಿಸಿಲ್ಲ ಅಂದ್ರೆ ಹೇಗೆ? ಸಾರ್ವಜನಿಕರಿಗೆ ಸಾರಿಗೆ ಸೇವೆ ಒದಗಿಸಬೇಕಾದರೆ ಹೊಸ ಬಸ್ ಖರೀದಿಸಲೇಬೇಕು ಎಂದು ಅವರು ನುಡಿದರು.
ಬೆಂಗಳೂರು, ಹುಬ್ಬಳ್ಳಿ ಧಾರವಾಡದಲ್ಲಿ ಎಲೆಕ್ಟ್ರಿಕ್ ಬಸ್ ಟೆಂಡರ್ ಕರೆದಿದ್ದೇವೆ. ಬೇರೆಯವರು ಹೂಡಿಕೆ ಮಾಡ್ತಾರೆ, ರಾಜ್ಯ ಸರ್ಕಾರ ಸಬ್ಸಿಡಿ ಕೊಡುತ್ತದೆ. ಪ್ರಾಯೋಗಿಕವಾಗಿ 350 ಬಸ್‌ಗಳನ್ನು ಬಿಡಲಾಗುತ್ತದೆ. ಒಂದು ವಾರದಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಯುತ್ತದೆ ಎಂದರು.
ಸಾರಿಗೆ ನೌಕರರ ಸಮಸ್ಯೆ ಬಗೆಹರಿಸಲು ಸಮಿತಿ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಮಿತಿ ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಆದಷ್ಟು ಬೇಗ ಎಲ್ಲಾ ಸವಲತ್ತುಗಳನ್ನು ಹಾಗೂ ಬೇಡಿಕೆಗಳನ್ನು ಈಡೇರಿಸಲಾಗುತ್ತದೆ ಎಂದರು.
ಸಚಿವ ಸಂಪುಟ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪನವರು ಹೈಕಮಾಂಡ್ ಜೊತೆ ಚರ್ಚಿಸಿ, ಅವರು ಒಪ್ಪಿಗೆ ಕೊಟ್ಟ ನಂತರ ತೀರ್ಮಾನ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.