ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ರೇಟು ಗಮನಿಸಿದರೆ, ಮೂರನೇ ಅಲೆ ಬಂದಿರುವುದು ಖಚಿತವಾಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ. ಕಳೆದ ಆರು ತಿಂಗಳಿನಿಂದ ಪಾಸಿಟಿವ್ ದರ ಶೇ. 0.1 ಕೂಡಅ ಇರಲಿಲ್ಲ, ಇದೀಗ 1.06 ಏರಿಕೆ ಆಗಿದೆ. ಅಂದರೆ ಮೂರನೇ ಅಲೆ ಆರಂಭವಾಗಿದೆ ಎಂದರ್ಥ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.
ಕೊರೊನಾ ಬರುವುದನ್ನ ತಡೆಯಲು ಆಗುವುದಿಲ್ಲ, ಆದರೆ ಸೋಂಕಿತರ ಸಂಖ್ಯೆ ಹೆಚ್ಚಾಗುವುದನ್ನ ಕಡಿಮೆ ಮಾಡಲು ಸಾಧ್ಯವಿದೆ. ಆ ಕ್ರಮಗಳ ಬಗ್ಗೆ ಇಂದು ವಿಶೇಷವಾಗಿ ತಜ್ಞರೊಂದಿಗೆ ಸಭೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ. ತಮ್ಮ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಒಮಿಕ್ರಾನ್ ದಿನೇ ದಿನೆ ಹೆಚ್ಚಾಗ್ತಿದ್ದು, ನಿನ್ನೆ ಒಂದೇ ದಿನ ಶೇ.1.06ಕ್ಕೆ ಏರಿಕೆ ಕಂಡಿದೆ. 1290 ಕೇಸ್ ಗಳು ಪತ್ತೆಯಾಗಿದ್ದು, ಇದರಲ್ಲಿ ಬೆಂಗಳೂರಿನಲ್ಲೇ ಹೆಚ್ಚು ಸೋಂಕಿತರು ಇದ್ದಾರೆ ಎಂದು ಸಚಿವರು ಸ್ಪಷ್ಟ ಪಡಿಸಿದರು.
ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಸೋಂಕು ಹೆಚ್ಚಳ
ದೇಶದಲ್ಲಿ ಎಲ್ಲ ಮೆಟ್ರೋಪಾಲಿಟನ್ ಸಿಟಿಗಳಲ್ಲೇ ಸೋಂಕು ಹೆಚ್ಚಳವಾಗ್ತಿದೆ. ಹೀಗಾಗಿ, ಬೆಂಗಳೂರು ಏರ್ ಪೋರ್ಟ್ ಹಾಗೂ ಜನಸಂದಣಿ ಪ್ರದೇಶದಲ್ಲಿ ಇನ್ನಷ್ಟು ನಿಗಾವಹಿಸುವ ಅಗತ್ಯ ಇದೆ. ಇದಕ್ಕಾಗಿ ಮ್ರೈಕೋ ಕಂಟೇನ್ಮೆಂಟ್ ಜೋನ್ ಮಾಡುವುದರ ಕುರಿತು ಇಂದು ಸಂಜೆ ನಡೆಯುವ ಸಿಎಂ ಜೊತೆಗಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು. ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ ಸೋಂಕು ಹೆಚ್ಚಳವಾಗಿದ್ದು ಹೆಚ್ಚಿನ ಜಾಗೃತಿ ವಹಿಸಬೇಕಿದೆ ಎಂದು ಇದೇ ವೇಳೆ ಸುಧಾಕರ್ ಹೇಳಿದರು.
ಮಕ್ಕಳಿಗೆ ಎಷ್ಟು ಡೋಸ್ ಲಸಿಕೆ?
ನಿನ್ನೆಯಿಂದ 15-18 ವರ್ಷದ ಮಕ್ಕಳಿಗೆ ಲಸಿಕಾ ಕಾರ್ಯಕ್ರಮ ನಡೆಯುತ್ತಿದೆ. ಹೀಗಾಗಿ, ಮಕ್ಕಳಿಗೆ ಎಷ್ಟು ಡೋಸ್ ಲಸಿಕೆ ನೀಡಲಾಗುತ್ತೆ, ಎಷ್ಟು ಅಂತರದಲ್ಲಿ ನೀಡಲಾಗುತ್ತೆ ಎಂಬುದರ ಕುರಿತು ವಿವರಿಸಿದ ಅವರು, ಸದ್ಯ ಕೇಂದ್ರದ ಮಾರ್ಗಸೂಚಿ ಪ್ರಕಾರ ಮೊದಲ ಡೋಸ್ ನೀಡುವಂತೆ ಹೇಳಿದ್ದು, ಎರಡನೇ ಡೋಸ್ ಕುರಿತು ಯಾವುದೇ ನಿರ್ದೇಶನ ಬಂದಿಲ್ಲ ಎಂದರು.
ಶಾಲಾ-ಕಾಲೇಜು ಬಂದ್ ಆಗುತ್ತಾ?
ಕೊರೊನಾ ತೀವ್ರತೆಗೆ ಪಕ್ಕದ ತೆಲಂಗಾಣ, ಮಹಾರಾಷ್ಟ್ರ,ಗೋವಾದಲ್ಲಿ ಶಾಲೆಗಳು ಬಂದ್ ಆಗಿವೆ. ಈ ಕುರಿತು ಮಾತಾನಾಡಿದ ಅವರು, ಹಲವು ಜಿಲ್ಲೆಗಳಲ್ಲಿ ಶಾಲಾ -ಕಾಲೇಜು ಬಂದ್ ಆಗಿದ್ದು ಇದನ್ನ ಗಮನಿಸುತ್ತಿದ್ದೇವೆ. ಇದೆಲ್ಲದರ ಕುರಿತು ಇಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.
ಬೆಂಗಳೂರಿಗೆ ಬೇಕು ಟಫ್ ರೂಲ್ಸ್
ಬೆಂಗಳೂರು ಈಗಾಗಲೇ ರೆಡ್ ಜೋನ್ ನಲ್ಲಿದ್ದು ಪ್ರತ್ಯೇಕವಾದ ಟಫ್ ರೂಲ್ಸ್ ಅನಿರ್ವಾಯ ಅಂತ ತಿಳಿಸಿದರು. ಜನ ಸಾಮಾನ್ಯರಿಗೆ ಯಾವುದೇ ತೊಂದರೆ ಆಗದಂತೆ ಯಾವ ಕ್ರಮ ಕೈಗೊಳ್ಳಬೇಕೆಂದು ನಿರ್ಧಾರ ಮಾಡಲಾಗುವುದು. ಜನರ ಬದುಕು ಯಥಾಸ್ಥಿತಿ ಬರುವ ಸಂದರ್ಭದಲ್ಲಿ ನಿಜಕ್ಕೂ ನಿಯಂತ್ರಣ ಮಾಡುವುದು ಸವಾಲೇ ಆಗಿದೆ. ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಇರುವುದರಿಂದ ಬೆಂಗಳೂರಿಗೆ ಹೆಚ್ಚಿನ ವಿದೇಶಿಗರು ಬರುತ್ತಾರೆ, ಹೀಗಾಗಿ ಸೋಂಕು ಬಹುಬೇಗ ಹರಡಲಿದೆ. ಇದನ್ನ ನಿಯಂತ್ರಿಸಲು ವಿಶೇಷ ಕ್ರಮ ಕೈಗೊಳ್ಳಲಾಗುವುದು ಎಂದು ಸುಧಾಕರ್ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಾದಯಾತ್ರೆ
ಸೋಂಕು ಇಷ್ಟು ವೇಗವಾಗಿ ಹರಡುತ್ತೆ ಅಂತ ಯಾರು ನಿರೀಕ್ಷೆ ಮಾಡಿರಲಿಲ್ಲ. ಜನವರಿ 15 ರ ನಂತರ ಮೂರನೇ ಅಲೆ ಬರುತ್ತೆ ಎಂಬ ಭಾವನೆ ಇತ್ತು, ಆದರೆ, ಕಳೆದ ಮೂರ್ನಾಲು ದಿನಗಳಿಂದ ವೇಗವಾಗಿ ಹರಡುವುದನ್ನ ನೋಡಿದ್ದರೆ ಕಾಂಗ್ರೆಸ್ ನಾಯಕರು ಪಾದಯಾತ್ರೆ ಕೈ ಬಿಡಬೇಕು ಅಂತ ಮನವಿ ಮಾಡಿದರು. ಅವರು ಹೋರಾಟ ಮಾಡುತ್ತಿರುವುದು ಜನರಿಗಾಗಿ ಕುಡಿಯುವ ನೀರಿಗೆ ಹೋರಾಟ ಮಾಡುತ್ತಿದ್ದಾರೆ.
ಇದಕ್ಕೆ ನಮ್ಮ ಅಭ್ಯಂತರ ಏನು ಇಲ್ಲ, ಅಧಿಕಾರ ಇದ್ದಾಗ ಇದೆಲ್ಲ ಮಾಡಲು ಅವರಿಗೆ ನೆನಪು ಆಗಲಿಲ್ಲ, ಈಗ ಚುನಾವಣೆ ಇದೆ ಅಲ್ಲವೇ ಅದಕ್ಕೆ ಇದನ್ನು ಮಾಡ್ತಿದ್ದಾರೆ. ಬೇರೆ ಬೇರೆ ಜಿಲ್ಲೆಗಳಿಂದ ಎಲ್ಲರನ್ನೂ ಕರೆಸಿ ಇಲ್ಲಿ ಹೋರಾಟಕ್ಕೆ ಮುಂದಾಗ್ತಿದ್ದಾರೆ. ಆದರೆ ಇದರಿಂದ ಕೊರೊನಾ ಹೆಚ್ಚಳ ಆದರೆ, ಅವರೇ ಅದರ ಜವಾಬ್ದಾರಿ ಹೊರ ಬೇಕು ಅಂದರು. ಕೊರೊನಾ ನೆಪ ಇಟ್ಟಕೊಂಡು ಪಾದಯಾತ್ರೆ ಮೊಟುಕು ಗೊಳಿಸುವ ಅವಶ್ಯಕತೆ ಇಲ್ಲ. ದೆಹಲಿ ಸೇರಿದಂತೆ ಇತರೆ ರಾಜ್ಯಗಳಲ್ಲಿ ಸೋಂಕು ಹೆಚ್ಚಾಗ್ತಿದೆ ಇದಕ್ಕೆ ನಾವು ಕಾರಣನಾ ಇದು ಸ್ವಾಭಾವಿಕವಾಗಿ ಆಗ್ತಿದೆ ಎಂದರು.