ಆನೇಕಲ್: ಇಡೀ ದೇಶ ಕೋವಿಡ್-19 ಓಡಿಸುವಲ್ಲಿ ಕಾರ್ಯನಿರತವಾದ್ರೆ ಇಲ್ಲಿಬ್ಬರು ಅರ್ಧ ಲೀಟರ್ ಹಾಲು ಹಂಚಿಕೆಯ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಬೆಳಗ್ಗೆ ಮನೆ-ಮನೆಗೆ ಹಾಲು ವಿತರಣೆಗೆಂದು ಹೊರಟಿದ್ದ ಆಶಾಕಾರ್ಯಕರ್ತೆ ನಾಗಮ್ಮ ಎನ್ನುವವರನ್ನು ಎಸ್ಡಿಎಂಸಿ ಅಧ್ಯಕ್ಷೆ ಮುನಿರತ್ನ ಮತ್ತು ಆಕೆಯ ಗಂಡ ರಮೇಶ್ ತಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿ, ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಈ ಕುರಿತಂತೆ ನಾಗಮ್ಮ ಪ್ರತಿಕ್ರಿಯೆ ನೀಡಿದ್ದು, ಆಶಾಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಹಾಲು ಹಂಚಿಕೆ ವಿಚಾರಕ್ಕೆ ಮಾತಿಗೆ ಮಾತು ಬೆಳೆದಿದ್ದು, ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಜಗಳ ಹೋಗಿತ್ತು. ಶಾಲಾಭಿವೃದ್ದಿ ಮಂಡಳಿ ಅಧ್ಯಕ್ಷೆ ಮುನಿರತ್ನಮ್ಮ ಹಳೇ ದ್ವೇಷದ ಹಿನ್ನೆಲೆ ಹೀಗೆ ಮಾಡಿದ್ದಾರೆ ಎಂದು ಜಿಗಣಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇನ್ನು ಮುನಿರತ್ಮಮ್ಮ ಮತ್ತು ನಾಗಮ್ಮ ಸಂಬಂಧಿಕರಾಗಿದ್ದು, ಶಾಲಾ ಕೊಠಡಿ ಶುಚಿಗೊಳಿಸುವ ವಿಚಾರಕ್ಕೆ ಇವರ ನಡುವೆ ಈ ಹಿಂದೆಯೇ ಜಗಳ ನಡೆದಿತ್ತು. ಜೊತೆಗೆ ಶಾಲಾ ಮಕ್ಕಳ ಆರೋಗ್ಯ ವಿಚಾರಣೆ ವಿಷಯಕ್ಕೆ ಸಂಬಂಧಿಸಿದಂತೆ ನಾಗಮ್ಮ ಸರಿಯಾಗಿ ಮುನಿರತ್ನಮ್ಮನ ಮಾತಿಗೆ ಸ್ಪಂದಿಸಿಲ್ಲ ಎಂಬ ದೂರುಗಳು ಸಹ ಕೇಳಿಬಂದಿದೆ. ಕೋವಿಡ್-19 ವಿಷಯಕ್ಕೆ ತಲೆಕೆಡಿಸಿಕೊಂಡಿರುವ ಪೊಲೀಸರು ಈ ಸಂಬಂಧ ದೂರನ್ನು ದಾಖಲಿಸಿಕೊಂಡು ಮುನಿರತ್ನಮ್ಮನನ್ನು ತನಿಖೆಗೆ ಒಳಪಡಿಸಿದ್ದಾರೆ.