ಬೆಂಗಳೂರು : ಮೈತ್ರಿ ಸರ್ಕಾರ ಮಂಡಿಸಿದ್ದ 2.40 ಲಕ್ಷ ಕೋಟಿ ಬಜೆಟ್ಗೆ ವಿಧಾನಸಭೆಯಲ್ಲಿ ಇಂದು ಅಂಗೀಕಾರ ದೊರೆತಿದೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಂಡಿಸಿದ ಬಜೆಟ್ ಅಂಗೀಕಾರ ಪ್ರಸ್ತಾವನೆಗೆ ವಿಧಾನಸಭೆಯಲ್ಲಿ ಇಂದು ಧ್ವನಿಮತದ ಅಂಗೀಕಾರ ಪಡೆಯಲಾಯಿತು. ಹಣಕಾಸು ಸಚಿವರೂ ಆಗಿರುವ ಯಡಿಯೂರಪ್ಪ ಬಜೆಟ್ ಪ್ರಸ್ತಾವನೆ ಮಂಡಿಸಿದ ವೇಳೆ ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿಯಾಗಿಲ್ಲ. ಸಂಪನ್ಮೂಲ ಕ್ರೂಢೀಕರಣ ಚೆನ್ನಾಗಿದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದರು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.11ರಷ್ಟು ಹೆಚ್ಚಳವಾಗಿದೆ. ಮೋಟಾರು ವಾಹನ ಕಾಯ್ದೆ ಹೊರತುಪಡಿಸಿ ಉಳಿದೆಲ್ಲ ತೆರಿಗೆಗಳ ಸಂಗ್ರಹ ನಿರೀಕ್ಷಿತ ಅಂದಾಜಿನಲ್ಲೇ ನಡೆಯುತ್ತಿದೆ. ಮುಂದಿನ ಆರು ತಿಂಗಳಲ್ಲಿ ಮೋಟಾರು ತೆರಿಗೆ ಸಂಗ್ರಹದಲ್ಲೂ ಸುಧಾರಣೆಯಾಗಿ ನಿರೀಕ್ಷಿತ ಗುರಿ ಮುಟ್ಟುವ ಸಾಧ್ಯತೆ ಇದೆ ಎಂದರು.
ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್ ಡಿ ಕುಮಾರಸ್ವಾಮಿಯವರು ಫೆಬ್ರವರಿಯಲ್ಲಿ ಬಜೆಟ್ ಮಂಡಿಸಿ ಜುಲೈವರೆಗೂ 80 ಸಾವಿರ ಕೋಟಿ ರೂ.ಗಳಿಗೆ ಲೇಖಾನುದಾನ ಪಡೆದುಕೊಂಡಿದ್ದರು. ಬಿಜೆಪಿ ಸರ್ಕಾರ ರಚನೆಯಾಗುತ್ತಿದ್ದಂತೆಯೇ ಮೂರು ತಿಂಗಳಿಗೆ ಅಂದರೆ ಅಕ್ಟೋಬರ್‌ವರೆಗೆ 62,751 ಕೋಟಿ ರೂ. ಲೇಖಾನುದಾನಕ್ಕೆ ಅಂಗೀಕಾರ ಪಡೆಯಲಾಯಿತು. 2019-20ನೇ ಸಾಲಿನ ಆರ್ಥಿಕ ವರ್ಷದಲ್ಲಿ ಏಳು ತಿಂಗಳಿಗೆ (ಅಕ್ಟೋಬರ್ 2019 ರವರೆಗೆ) 1,42,919.38 ಕೋಟಿ ಮೊತ್ತದ ಲೇಖಾನುದಾನಕ್ಕೆ ಅನುಮೋದನೆ ಪಡೆಯಲಾಗಿದೆ. ಈಗ ಒಟ್ಟು ಬಜೆಟ್ನ 2,40,745.85 ಕೋಟಿ ರೂ. ಗಾತ್ರಕ್ಕೆ ಅಂಗೀಕಾರ ನೀಡುವಂತೆ ಮನವಿ ಮಾಡಿದರು. ಈ ಬಜೆಟ್ನ ಗಾತ್ರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.7.17 ರಷ್ಟು ಹೆಚ್ಚಾಗಿದೆ. ವಿತ್ತೀಯ ಕೊರತೆ ಶೇ.3ರ ಮಿತಿಯಲ್ಲಿ ಇರಬೇಕು. ಅದನ್ನು ನಾವು ನಿಭಾಯಿಸಿದ್ದೇವೆ ಎಂದು ಹೇಳಿದರು.
ಸಂಪನ್ಮೂಲ ಕ್ರೂಢೀಕರಣ: ಸಂಪನ್ಮೂಲ ಕ್ರೂಢೀಕರಣಕ್ಕೆ ಮುಂದಾಗಿದ್ದು, ವಾಣಿಜ್ಯ ತೆರಿಗೆ 76,046 ಕೋಟಿ, ಅಬಕಾರಿ ತೆರಿಗೆ 20, 950 ಕೋಟಿ, ಮೋಟಾರು ವಾಹನಗಳ ತೆರಿಗೆ 7,100 ಕೋಟಿ, ನೋಂದಣಿ ಮತ್ತು ಮುದ್ರಾಂಕ ತೆರಿಗೆ, 11, 828 ಕೋಟಿ, ಇತರ ತೆರಿಗೆಗಳು 3069 ಕೋಟಿ ರೂ. ಹಿಂದಿನ ವರ್ಷದ ತೆರಿಗೆ 1,06,621 ಕೋಟಿ ರೂ.ಗಳಿಗೆ ಹೋಲಿಸಿದರೆ ಶೇ.11.6ರಷ್ಟು ವೃದ್ಧಿ ಕಾಣುವುದೆಂದು ಅಂದಾಜಿಸಲಾಗಿದೆ. ಆದರೆ, ಮುಂದಿನ ಆರು ತಿಂಗಳಲ್ಲಿ ಸುಧಾರಿಸುವ ನಿರೀಕ್ಷೆ ಇದೆ. ಉಳಿದಂತೆ ಎಲ್ಲಾ ತೆರಿಗೆಗಳು ನಿಗದಿತ ಪ್ರಮಾಣದಲ್ಲೇ ಸಂಗ್ರಹವಾಗುತ್ತಿವೆ. ಆರು ತಿಂಗಳ ಪ್ರಗತಿಯಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.15.03ರಷ್ಟು ಸಂಪನ್ಮೂಲ ಕ್ರೂಢೀಕರಣ ಹೆಚ್ಚಾಗಿದೆ ಎಂದು ವಿವರಿಸಿದರು.
ಅತಿವೃಷ್ಠಿಗೆ ಅಗತ್ಯವಾದ ಹಣಕಾಸನ್ನು ಪೂರಕ ಬಜೆಟ್ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಂಪನ್ಮೂಲ ಕ್ರೂಢೀಕರಣ ಮಾಡಿಕೊಂಡು ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.