ಬೆಂಗಳೂರು: ಮಹಾಮಾರಿ ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯ ಸರ್ಕಾರ 'ಬಿ' ಕರಾಬು ಸರ್ಕಾರಿ ಜಮೀನು ಮಾರಾಟಕ್ಕೆ ಮುಂದಾಗಿದೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂ. ಆದಾಯ ಬರಲಿದೆ.
ಬೆಂಗಳೂರು ನಗರ ಹಾಗೂ ನಗರದ ಮಿತಿಯಿಂದ 18 ಕಿ.ಮೀ. ವ್ಯಾಪ್ತಿಯೊಳಗೆ ಬರುವ 'ಬಿ' ಕರಾಬು ಜಮೀನುಗಳಿಗೆ ಇದು ಅನ್ವಯವಾಗುತ್ತದೆ. ಇದಕ್ಕಾಗಿ ಭೂಕಂದಾಯ ಕಾಯಿದೆ ಕಲಂ 64(2) ಹಾಗೂ 69ಕ್ಕೆ ತಿದ್ದುಪಡಿ ತರಲಾಗಿದೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂ. ಆದಾಯ ನಿರೀಕ್ಷಿಸಲಾಗಿದೆ.
ಈ ಹಿಂದೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿ ಕರಾಬು ಜಮೀನು ಭೂಮಿಯನ್ನು ಸಕ್ರಮಗೊಳಿಸಲು ಹಾಗೂ ಈ ಜಮೀನನ್ನು ಬಳಸುತ್ತಿರುವವರು ಮಾರುಕಟ್ಟೆ ಮೌಲ್ಯದ ಎರಡು ಪಟ್ಟು ಹೆಚ್ಚು ದರ ವಿಧಿಸಿ ಸಕ್ರಮ ಮಾಡಿಕೊಳ್ಳಲು ಅನಮತಿ ಪಡೆಯಲಾಗಿದೆ.
ಬಿ ಕರಾಬು ಜಮೀನು ಯಾವುದು?
'ಬಿ' ಕರಾಬು ಜಮೀನನ್ನು ಲಾಕ್ಡ್ ಭೂಮಿ ಎಂದೂ ಕರೆಯಲಾಗುತ್ತದೆ. ಬೆಂಗಳೂರು ನಗರದಲ್ಲಿ ಸಾಕಷ್ಟು ಬಿ ಕರಾಬು ಜಮೀನುಗಳು ಬಡಾವಣೆ ಹಾಗೂ ಇನ್ನಿತರ ಸ್ವತ್ತುಗಳ ನಡುವೆ ಇವೆ. ಈಗಿನವರೆಗೆ ಜಮೀನು ಮಾಲೀಕರು ತಮ್ಮ ವ್ಯಾಪ್ತಿಯೊಳಗಿದ್ದ ಬಿ ಕರಾಬು ಜಮೀನನ್ನು ಅಕ್ರಮವಾಗಿ ಬಳಸುತ್ತಿದ್ದರು. ಇನ್ನು ಮುಂದೆ ಆ ಜಾಗವನ್ನು ಸರ್ಕಾರ ನಿಗದಿಪಡಿಸಿದ ದರವನ್ನು ಪಾವತಿಸಿ ಸಕ್ರಮಗೊಳಿಸಬಹುದು. ಅಲ್ಲದೇ, ಜಮೀನುಗಳಲ್ಲಿ ಪ್ರಕೃತಿದತ್ತವಾಗಿ ಹರಿಯುವ ಹಳ್ಳ - ಕೊಳ್ಳ, ಕಾಲುವೆ, ಸಾರ್ವಜನಿಕ ಬಳಕೆಗೆ ಉಪಯೋಗವಾಗುವ ಕಾಲುದಾರಿ 'ಬಿ' ಕರಾಬು ಭೂಮಿ ಎನಿಸಿದೆ. ಜೊತೆಗೆ ಉಳುಮೆ ಮಾಡಲಾಗದ ಪಾಳು ಭೂಮಿ ಕೂಡ ಈ ವರ್ಗಕ್ಕೆ ಸೇರಿದೆ. ಇಂತಹ ಭೂಮಿ ಆಯಾ ಸರ್ವೆ ನಂಬರ್‌ಗಳ ವ್ಯಾಪ್ತಿಯಲ್ಲಿ ಕೆಲ ಗುಂಟೆಗಳಷ್ಟು ಪ್ರಮಾಣದಲ್ಲಿ ಇವೆ. ಇವುಗಳ ಸ್ವರೂಪ ಬದಲಿಸಲು ಕಾನೂನಿನಲ್ಲಿ ಅವಕಾಶ ಇಲ್ಲ.
ಇದನ್ನೂ ಓದಿ: ಅಪಾರ್ಟ್ಮೆಂಟ್, ಕಮ್ಯುನಿಟಿ ಹಾಲ್ಗಳಲ್ಲಿ ಸಿಸಿಸಿ ಕೇಂದ್ರ ತೆರೆಯಲು ಮಾರ್ಗಸೂಚಿ ಹೀಗಿವೆ..
ಜಮೀನು ಎಷ್ಟಿದೆ?
ಬೆಂಗಳೂರು ನಗರದಲ್ಲಿ 12 ಸಾವಿರ ಎಕರೆ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 9 ಸಾವಿರ ಎಕರೆ ಸೇರಿ, 21 ಸಾವಿರ ಎಕರೆ ಸರ್ಕಾರಿ ಜಮೀನನ್ನು ಮಾರಾಟ ಮಾಡಲು ಕಂದಾಯ ಇಲಾಖೆ ಮೂರು ವಿವಿಧ ದರ ನಿಗದಿಪಡಿಸಿದೆ. ನಗರ ಮಿತಿಯಿಂದ 18 ಕಿ.ಮೀ. ವ್ಯಾಪ್ತಿಯೊಳಗೆ ಬರುವಂತಹ ಬಿ ಕರಾಬು ಜಮೀನುಗಳ ಮಾರಾಟದಿಂದ ಸರ್ಕಾರಕ್ಕೆ ಭಾರಿ ಆದಾಯ ಬರುವುದಲ್ಲದೇ, ರಿಯಲ್ ಎಸ್ಟೇಟ್ ಉದ್ಯಮವೂ ಇನ್ನಷ್ಟು ಬೆಳೆಯಲಿದೆ. ಅಲ್ಲದೆ, ಬೆಂಗಳೂರು ಸುತ್ತಮುತ್ತ ಭಾಗದಲ್ಲಿರುವ ಭೂಮಿಗೆ ಈಗಾಗಲೇ ಚಿನ್ನದಂತಹ ಬೆಲೆ ಬಂದಿದೆ. ಇದೀಗ ಬಿ ಕರಾಬು ಸರ್ಕಾರಿ ಜಮೀನು ಮಾರಾಟದಿಂದ ಭೂಮಿಯ ದರ ಹೆಚ್ಚುವ ಸಾಧ್ಯತೆಯಿದೆ.
ಹೊಸ ನಿಯಮ ಏನು?
ಕೈಗಾರಿಕೆಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ, ಹಾಗೂ ಕೃಷಿಯೇತರ ಬಳಕೆ ಹಿನ್ನೆಲೆಯಲ್ಲಿ ಸರ್ಕಾರಿ ಭೂಮಿಯನ್ನು ಗುತ್ತಿಗೆ ಪಡೆಯುವ ಬಗ್ಗೆ ಸರ್ಕಾರ ಹೊಸ ನಿಯಮವನ್ನು ರೂಪಿಸಿದೆ. ಅಲ್ಲದೇ ಹೊಸ ನಿಯಮದಂತೆ ಪರಿಶಿಷ್ಟ ಜಾತಿ (ಎಸ್ಸಿ)ಹಾಗೂ ಪರಿಶಿಷ್ಟ ಪಂಗಡ(ಎಸ್ಟಿ ) ದವರಿಗೆ ಶೇ.2.5 ಆಸ್ತಿ ಸಿಗಲಿದೆ. ಬೇರೆ ಸಮುದಾಯದವರು ಕೈಗಾರಿಕೆ ಹಾಗೂ ಶಿಕ್ಷಣಕ್ಕಾಗಿ ಪಡೆಯುವ ಭೂಮಿಯನ್ನು ಮಾರುಕಟ್ಟೆ ದರದಂತೆ ಶೇ.2.5 ಪಾವತಿಸಬೇಕು. ಕೈಗಾರಿಕೆ ಹಾಗೂ ಶಿಕ್ಷಣಕ್ಕಾಗಿ ಸರ್ಕಾರ, ಎಸ್ಸಿ ಮತ್ತು ಎಸ್ಟಿ ಪಂಗಡದವರಿಗೆ ಶೇ.50 ಸರ್ಕಾರಿ ಜಮೀನು ಗುತ್ತಿಗೆ ಪಡೆಯುವುದನ್ನು ನಿಗದಿಗೊಳಿಸಲಾಗಿದೆ. ಇತರ ಸಮುದಾಯದವರು ಮಾರುಕಟ್ಟೆ ದರವನ್ನು ಪಾವತಿಸಬೇಕು. ಬೆಂಗಳೂರಿನಲ್ಲಿ 921 ಎಕರೆ ಭೂಮಿಯನ್ನು ಗುತ್ತಿಗೆ ರೂಪದಲ್ಲಿ ನೀಡಲಾಗಿದೆ.
ಇದನ್ನೂ ಓದಿ: ನಮೂನೆ - 57ರಲ್ಲಿ ಸ್ವೀಕರಿಸಿದ ಅರ್ಜಿಗಳನ್ನು ಅಪ್ಲೋಡ್ ಮಾಡಲು ಮೇ 1 ರಿಂದ ಜುಲೈ 31ರವರೆಗೆ ಕಾಲಾವಕಾಶ