ಬೆಂಗಳೂರು: ಸಾಂಕ್ರಾಮಿಕ ಕೊರೊನಾ ಸೋಂಕು ವ್ಯಾಪಿಸಿದ್ದ ಕಾರಣಕ್ಕೆ 2020-21ರ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಬೇಕೇ, ಬೇಡವೇ ಎಂಬ ಸಾಕಷ್ಟು ವಾದ-ವಿವಾದಗಳ ನಡುವೆಯೂ ಪರೀಕ್ಷೆ ನಿರಾತಂಕವಾಗಿ ಮುಗಿದಿದೆ.
ಹತ್ತನೇ ತರಗತಿ ಪರೀಕ್ಷೆಯನ್ನು ವಿಶೇಷ ರೀತಿಯಲ್ಲಿ ಪ್ರಶ್ನೆ ಪತ್ರಿಕೆ ಮಾದರಿಯನ್ನು ಬದಲಾಯಿಸಿ ನಡೆಸಲಾಗಿದೆ. ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಪಾಸ್ ಮಾಡುವುದು ಹಾಗೂ ಅವರ ಕಲಿಕಾ ಮಟ್ಟ ನಿರ್ಧಾರ ಮಾಡುವುದು ಕಷ್ಟವಾಗ್ತಿದೆ. ಇದಕ್ಕೆ ಕಾರಣ, ಕಳೆದ ವರ್ಷ 9ನೇ ತರಗತಿಯ ಪರೀಕ್ಷೆಯೇ ನಡೆದಿಲ್ಲ, ಯಾವುದೇ ಮಾನದಂಡ ಇಲ್ಲದೇ ಇರುವುದರಿಂದ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿತ್ತು.
ಈ ಕುರಿತು ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಚಿವ ಸುರೇಶ್ ಕುಮಾರ್, ಆರಂಭದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಬೇಕು ಅಂದಾಗ, ಹಲವರು ಸಚಿವರದ್ದು ಕೆಟ್ಟ ನಿರ್ಧಾರ ಅಂದಿದ್ದರು, ಇದೀಗ ಅವರೇ ದಿಟ್ಟ ನಿರ್ಧಾರ ಎನ್ನುತ್ತಿದ್ದಾರೆ. ಪರೀಕ್ಷೆ ನಡೆಸುವುದು ಯಾವುದೇ ಹಟವಲ್ಲ, ಅದು ಸದುದ್ದೇಶದಿಂದ ಮಾಡಿರುವ ಕರ್ತವ್ಯ. ಇಡೀ ರಾಜ್ಯದ ಮಕ್ಕಳು-ಪೋಷಕರರಿಗೆ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಇನ್ನು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಒಟ್ಟಾರೆ ಹಾಜರಾತಿ ಶೇ 96.65ರಷ್ಟು ಇದ್ದು, ಕಳೆದ ವಾರ್ಷಿಕ ಪರೀಕ್ಷೆಗಿಂತ ಹೆಚ್ಚು ಮಕ್ಕಳು ಈ ಸಲ ಪರೀಕ್ಷೆಗೆ ಹಾಜರಾಗಿದ್ದರು.
ವಿಷಯವಾರು ಮಾಹಿತಿ
- ಭಾಷಾ-1 ವಿಷಯಕ್ಕೆ 8,19,694 ಅಭ್ಯರ್ಥಿಗಳು ನೋಂದಾಯಿಸಿದ್ದರೆ, 8,16,544 ಅಭ್ಯರ್ಥಿಗಳು ಹಾಜರಾಗಿ 3150 ಮಕ್ಕಳು ಗೈರು ಹಾಜರಾಗಿಯಾಗಿದ್ದಾರೆ. ಶೇ. 99.62 ಹಾಜರಾತಿ ಇದೆ. ಕಳೆದ ವರ್ಷ 98.41 ಇತ್ತು.
- ಭಾಷಾ -2 ವಿಷಯಕ್ಕೆ 8,27,988 ಅಭ್ಯರ್ಥಿಗಳು ನೋಂದಾಯಿಸಿದ್ದರೆ, 8,24,686 ಅಭ್ಯರ್ಥಿಗಳು ಹಾಜರಾಗಿ 3302 ಮಕ್ಕಳು ಗೈರು ಹಾಜರಾಗಿಯಾಗಿದ್ದಾರೆ. ಶೇ. 99.60 ಹಾಜರಾತಿ ಇದೆ. ಕಳೆದ ವರ್ಷ 98.47 ಇತ್ತು.
- ಭಾಷಾ -3 ವಿಷಯಕ್ಕೆ 8,17,640 ಅಭ್ಯರ್ಥಿಗಳು ನೋಂದಾಯಿಸಿದ್ದರೆ, 8,14,538 ಅಭ್ಯರ್ಥಿಗಳು ಹಾಜರಾಗಿ 3102 ಮಕ್ಕಳು ಗೈರು ಹಾಜರಾಗಿಯಾಗಿದ್ದಾರೆ. ಶೇ. 99.62 ಹಾಜರಾತಿ ಇದೆ. ಕಳೆದ ವರ್ಷ 98.47 ಇತ್ತು.
ಕೋವಿಡ್ ಪಾಸಿಟಿವ್ ಇದ್ದ 67 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು
ಕೋವಿಡ್ ಕೇರ್ ಸೆಂಟರ್ನಲ್ಲಿ 67 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೋಲಾರ, ಹಾಸನದಲ್ಲಿ ಇಬ್ಬರು ಸೋಂಕಿತ ವಿದ್ಯಾರ್ಥಿಗಳು ಗೈರಾಗಿದ್ದರು. ಪರೀಕ್ಷಾ ಕೇಂದ್ರದಲ್ಲಿದ್ದ ಐಸೋಲೇಷನ್ ರೂಮ್ನಲ್ಲಿ 152 ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕೇಂದ್ರ ಬದಲು ಮಾಡಿಕೊಂಡ 10,693 ವಿದ್ಯಾರ್ಥಿಗಳು, ಹಾಸ್ಟೆಲ್ ನಿಂದ ಬಂದು 2870 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಆಗಸ್ಟ್ 10ರ ಅಸುಪಾಸು ಫಲಿತಾಂಶ
18 ದಿವಸದಲ್ಲಿ ಅಂದ್ರೆ ಆಗಸ್ಟ್ 10ರ ಅಸುಪಾಸಿನಲ್ಲಿ ಫಲಿತಾಂಶ ಪ್ರಕಟಿಸಲಾಗುವುದು. ಕೇರಳ, ಮೀಜೋರಾಂ ಮೇಘಾಲಯ, ನಾಗಾಲ್ಯಾಂಡ್ ನಾಲ್ಕು ರಾಜ್ಯಗಳು ಕೋವಿಡ್ ಮುನ್ನವೇ ಪರೀಕ್ಷೆ ನಡೆಸಿವೆ. ಲಾಕ್ ಡೌನ್ ಮುಗಿದ ಮೇಲೆ ಪರೀಕ್ಷೆ ಮುಗಿಸಿದ್ದು ಕರ್ನಾಟಕ ರಾಜ್ಯ ಅಂತ ಇದೇ ವೇಳೆ ತಿಳಿಸಿದರು. ಪರೀಕ್ಷೆ ನಡೆಸಿದ ರೀತಿಯ ಕುರಿತು ಯಶೋಗಾಥೆ ಪುಸ್ತಕ ಹೊರತರಲು ಚಿಂತನೆ ನಡೆದಿದೆ ಮುಂದಿನ ದಿನಗಳಲ್ಲಿ ಇದೊಂದು ಗೈಡ್ ಆಗಲಿದೆ ಎಂದರು.
ಎಲ್ಲ ಅಭ್ಯರ್ಥಿಗಳಿಗೂ ಪಿಯು ಪ್ರವೇಶ ಲಭ್ಯ
ಈ ಬಾರಿ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿರುವುದರಿಂದ ಪಿಯುಸಿ ಸೇರಬಯಸುವ ಎಲ್ಲರಿಗೂ ಪ್ರವೇಶಾವಕಾಶ ಕಲ್ಪಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರ್ಕಾರಿ, ಸರ್ಕಾರಿ ಅನುದಾನಿತ, ಖಾಸಗಿ ಕಾಲೇಜುಗಳಲ್ಲಿ ಸದ್ಯ 12 ಲಕ್ಷ ಸೀಟು ಲಭ್ಯವಿವೆ. ಇದಕ್ಕಿಂತ ಹೆಚ್ಚು ಡಿಮ್ಯಾಂಡ್ ಬಂದರೆ ಅಂತಹ ಕಾಲೇಜುಗಳು ಹೊಸ ಸೆಷನ್ ಶುರು ಮಾಡಬಹುದು. ಅದಕ್ಕೆ ನಮ್ಮಿಂದ ಅನುಮತಿ ಇದೆ ಎಂದು ತಿಳಿಸಿದರು.