ಬೆಂಗಳೂರು: ಬೆಂಗಳೂರಿನ ಹಲವೆಡೆ ಮಳೆ ಅವಾಂತರದಿಂದ ನಗರದ ಖ್ಯಾತಿಗೆ ಧಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಮುಖ್ಯಮಂತ್ರಿಗಳು, ಬಿಜೆಪಿ ಹಿರಿಯ ನಾಯಕ ಎಸ್.ಎಂ. ಕೃಷ್ಣ ಪತ್ರ ಬರೆದಿದ್ದು, ಬೆಂಗಳೂರಿಗೆ ಇರುವ ಬ್ರ್ಯಾಂಡ್ ಅನ್ನು ಉಳಿಸಿಕೊಳ್ಳುವ ಕುರಿತು ಕೆಲವು ಸಲಹೆಗಳನ್ನು ನೀಡಿದ್ದಾರೆ.
ಕಳವಳ: ಕಳೆದ ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಿರಂತರ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ಹಲವು ಅವಾಂತರಗಳು ಘಟಿಸಿ ಜನಜೀವನಕ್ಕೆ ತೀವ್ರ ತೊಂದರೆಯನ್ನು ಉಂಟುಮಾಡಿದೆ. ಅದರಲ್ಲೂ ವಿಶ್ವದಲ್ಲಿನ ವೇಗದ ಬೆಳವಣಿಗೆಗಳ ನಗರಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ನಗರದಲ್ಲಿನ ಮಳೆ ಅನಾಹುತಗಳು ಆತಂಕ ಹುಟ್ಟಿಸಿದೆ. ಇದು 'ಬ್ರ್ಯಾಂಡ್ ಬೆಂಗಳೂರು' ಹೆಸರಿಗೆ ಹಿನ್ನೆಡೆ ತರುವ ಆತಂಕ ಸೃಷ್ಟಿಸಿದೆ ಎಂದು ಎಸ್ಎಂ ಕೃಷ್ಣ ಕಳವಳ ವ್ಯಕ್ತಪಡಿಸಿದ್ದಾರೆ.
ಸಲಹೆ: ಮಳೆಹಾನಿಯಿಂದ ಭವಿಷ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆ ಮತ್ತು ರಾಜ್ಯಕ್ಕೆ ಬಂಡವಾಳ ಹೂಡುವ ಹೂಡಿಕೆದಾರರಿಗೆ ತಪ್ಪು ಸಂದೇಶ ರವಾನೆಯಾಗಲಿದೆ. ಪರಿಣಾಮ, ಇಲ್ಲಿ ಪ್ರತಿಷ್ಠಾಪನೆಗೊಳ್ಳಬಹುದಾದ ಕೈಗಾರಿಕೆಗಳು ಬೇರೆ ರಾಜ್ಯಗಳ ಪಾಲಾಗಿ ನಮ್ಮ ರಾಜ್ಯದ ಅಭಿವೃದ್ಧಿಗೆ ತೊಡಕಾಗಲಿದೆ ಎಂದು ಆತಂಕ ವ್ಯಕ್ತಪಡಿಸಿ ಕೆಲ ಸಲಹೆಗಳನ್ನು ನೀಡಿದ್ದಾರೆ.
ನಾನು ಮುಖ್ಯಮಂತ್ರಿಯಾಗಿದ್ದಾಗ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಆದ್ಯತೆ ನೀಡಿ ವಿಪುಲ ಅವಕಾಶಗಳನ್ನು ನೀಡಿದ್ದರಿಂದ ಅಮೆರಿಕದ ಕ್ಯಾಲಿಫೋರ್ನಿಯಾ ನಗರದ ಸಿಲಿಕಾನ್ ವ್ಯಾಲಿಗೆ ಪರ್ಯಾಯವಾಗಿ ಬೆಂಗಳೂರು ನಗರ ಬೆಳೆದು ಯುವ ಜನಾಂಗಕ್ಕೆ ಲಕ್ಷಾಂತರ ಉದ್ಯೋಗ ಸೃಷ್ಟಿಗೆ ಕಾರಣವಾಯಿತು. ಇದರ ಪರಿಣಾಮವಾಗಿ ಬೆಂಗಳೂರು ಇಂದು ಬೃಹದಾಕಾರವಾಗಿ ಬೆಳೆದು ನಗರದ ವಿಸ್ತೀರ್ಣ ನಾಲ್ಕು ಪಟ್ಟು ಹೆಚ್ಚಾಗಿದೆ. ಬೆಂಗಳೂರು ನಗರ ಪಾಲಿಕೆ ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ ಬದಲಾಗಿ ಬೆಂಗಳೂರಿನ ಸುತ್ತಮುತ್ತಲಿನ ಹಲವು ಬಡಾವಣೆಗಳನ್ನು ತನ್ನ ಒಡಲಲ್ಲಿ ಸೇರಿಸಿಕೊಂಡಿದೆ. ಇದರಿಂದ ಬೆಂಗಳೂರಿನ ಆದಾಯ ನಿರೀಕ್ಷೆಗೂ ಮೀರಿ ಹೆಚ್ಚಾಗಿದೆ. ರಾಜ್ಯದ ಬಜೆಟ್ ಗಾತ್ರದಲ್ಲಿ ಅರ್ಧದಷ್ಟು ಭಾಗ ಬೆಂಗಳೂರು ನಗರದಿಂದ ಹರಿದು ಬರುವಂತಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
"ಬ್ರ್ಯಾಂಡ್ ಬೆಂಗಳೂರು": ಭವಿಷ್ಯದ ಬೆಂಗಳೂರು ಹಾಗೂ ರಾಜ್ಯದ ಅಭಿವೃದ್ಧಿ ಗಮನದಲ್ಲಿ ಇಟ್ಟಕೊಂಡು ದೂರಗಾಮಿ ದೃಷ್ಟಿಯಿಂದ ಶಾಶ್ವತ ಕಾರ್ಯಕ್ರಮಗಳನ್ನು ರೂಪಿಸಿ "ಬ್ರ್ಯಾಂಡ್ ಬೆಂಗಳೂರು" ಹೆಸರನ್ನು ಉಳಿಸಿಕೊಳ್ಳಲು ದಿಟ್ಟ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದ್ದು, ಆ ನಿಟ್ಟಿನಲ್ಲಿ ಕೆಲ ಸಲಹೆಗಳನ್ನು ತಮ್ಮ ಅವಗಹನೆಗೆ ತರಬಯಸುತ್ತೇನೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಎಸ್ಎಂಕೆ ಸಲಹೆಗಳು:
- ನಾನು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ಅಭಿವೃದ್ಧಿಗೆ ರಚಿಸಿದ್ದ ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್ ಸಮಿತಿಯನ್ನು ಪುನರ್ ರಚಿಸಿ ವಿವಿಧ ವಿಭಾಗಗಳ ತಜ್ಞರನ್ನು ಸೇರಿಸಿ ಅವರ ಸಲಹೆಗಳನ್ನು ಪಡೆದು ದೂರಗಾಮಿ ನೆಲೆಯಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ನೀಲಿನಕ್ಷೆ ತಯಾರಿಸುವುದು.
- ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಸುಧಾರಿಸಿ ಹೊಸದಾಗಿ ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಗೊಂಡಿರುವ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ತಜ್ಞ ಅಧಿಕಾರಿಗಳ ತಂಡ ರಚಿಸುವುದು ಹಾಗೂ ರಾಜಕಾಲುವೆಗಳ ನಿರ್ವಾಹಣೆಗೆ ಆದ್ಯತೆ ಮೇಲೆ ಕ್ರಮ ವಹಿಸಿ ಮುಂಗಾರು ಮಳೆಯ ಆಗಮನಕ್ಕೂ ಮುನ್ನ ಸಮರೋಪಾದಿಯ ಕಾರ್ಯ ಕೈಗೊಳ್ಳುವುದು.
- ಬೆಂಗಳೂರಿಗೆ ಪರ್ಯಾಯವಾಗಿ ಮೈಸೂರು, ತುಮಕೂರು ಮತ್ತು ಹುಬ್ಬಳ್ಳಿಯಂತಹ ನಗರಗಳನ್ನು ಗುರುತಿಸಿ ನೂತನ ಕೈಗಾರಿಕಾ ವಸಹಾತುಗಳ ಸ್ಥಾಪನೆಗೆ ಅವಕಾಶ ಕಲ್ಪಿಸಿ ಬೆಂಗಳೂರಿ ನಗರದ ಮೇಲಿನ ಒತ್ತಡ ಕಡಿಮೆ ಮಾಡುವುದು
- ಬೆಂಗಳೂರು ವ್ಯಾಪ್ತಿಯ ಶಾಸಕರು ಸಂಸದರು ಹಾಗೂ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದು ವಲಯವಾರು ಸಮಸ್ಯೆಗಳನ್ನು ಪತ್ತೆ ಹಚ್ಚಿ ಅವುಗಳ ಶಾಶ್ವತ ಪರಿಹಾರಕ್ಕೆ ಕಾಲ ಮಿತಿಯಲ್ಲಿ ಕಾರ್ಯಕ್ರಮ ರೂಪಿಸಿ ಅದಕ್ಕೆ ತಕ್ಕ ಅನುದಾನ ಒದಗಿಸುವುದು.
ಇದನ್ನೂ ಓದಿ: SSLC Result-2022: ಶೇ. 90.29 ವಿದ್ಯಾರ್ಥಿನಿಯರು ಪಾಸ್, 145 ಮಕ್ಕಳಿಗೆ 625ಕ್ಕೆ 625 ಅಂಕ
ಈ ಅಂಶಗಳ ಜೊತೆಗೆ ರಾಜ್ಯದ ಸರ್ವಪಕ್ಷಗಳ ನಾಯಕರ ಸಲಹೆ ಪಡೆದು ರಾಜ್ಯದ ಅಭಿವೃದ್ಧಿ ಮತ್ತು ಭವಿಷ್ಯದ ಜನಾಂಗದ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.