ಬೆಂಗಳೂರು: ಗಂಡ ಹೆಂಡ್ತಿ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಮಾತು ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳೇ ಸಾಕ್ಷಿ. ಸಾರಿಗೆ ನೌಕರರು ಮತ್ತು ಸರ್ಕಾರದ ನಡುವಿನ ಜಟಾಪಟಿ ಎರಡನೇ ದಿನವೂ ಮುಂದುವರೆದಿದ್ದು, ಇವರಿಬ್ಬರ ಮಧ್ಯೆ ಸಿಲುಕಿರುವ ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ.
ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸರ್ಕಾರವೇನೋ ಖಾಸಗಿ ಬಸ್, ಮ್ಯಾಕ್ಸಿಕ್ಯಾಬ್ಗಳ ಮೊರೆ ಹೋಗಿದೆ. ಆದರೆ, ಸರಿಯಾದ ಸಮಯಕ್ಕೆ ನಿಗದಿತ ಸ್ಥಳಕ್ಕೆ ತಲುಪಲಾಗದೇ ಸಾಮಾನ್ಯ ಜನರು ಹೈರಾಣಾಗಿದ್ದಾರೆ. ನಗರ ಸಾರಿಗೆ ಬಸ್ಗಳು ಇಲ್ಲದ ಕಾರಣ ಹಾಗೇ ನೂರಾರು ರೂಪಾಯಿ ಕೊಟ್ಟು ಆಟೋದಲ್ಲಿ ಪ್ರಯಾಣಿಸಲು ಸಾಧ್ಯವಾಗದೇ ಖಾಸಗಿ ಬಸ್ಗಳಲ್ಲೇ ಪ್ರಯಾಣಿಸುತ್ತಿದ್ದಾರೆ. ಇತ್ತ ಬಸ್ಗಳಲ್ಲಿ ಪ್ರಯಾಣಿಕರು ಫುಲ್ ಆದ ಕಾರಣ ಬಸ್ಸಿನ ಟಾಪ್ ಮೇಲೆ ಕುಳಿತು ಪ್ರಯಾಣಿಸುತ್ತಿರುವ ದೃಶ್ಯ ಬೆಂಗಳೂರು ನಗರದಲ್ಲಿ ಕಂಡುಬಂದಿದೆ.
ನಿನ್ನೆ ಒಂದೇ ದಿನ 11 ಸಾವಿರಕ್ಕೂ ಹೆಚ್ಚು ಖಾಸಗಿ ಬಸ್ಸುಗಳಿಂದ ಸೇವೆ: ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ, ಸಾರಿಗೆ ನೌಕರರಿಗೆ ಸೆಡ್ಡು ಹೊಡೆದು ಖಾಸಗಿ ಬಸ್ಗಳನ್ನ ರಸ್ತೆಗಿಳಿಸಲಾಗಿದೆ. ಪರ್ಯಾಯ ವ್ಯವಸ್ಥೆ ಹೆಸರಿನಲ್ಲಿ ಬರೋಬ್ಬರಿ 22 ಸಾವಿರ ಖಾಸಗಿ ಬಸ್ಸುಗಳಿಗೆ ಸಾರಿಗೆ ಇಲಾಖೆ ಪರ್ಮಿಟ್ ನೀಡಿದೆ. ನಿನ್ನೆ ಒಂದೇ ದಿನ 11,155 ಖಾಸಗಿ ಬಸ್ಗಳಿಂದ ಪ್ರಯಾಣಿಕರಿಗೆ ಸೇವೆ ಒದಗಿಸಲಾಗಿದೆ. ಕೆಎಸ್ಆರ್ಟಿಸಿ ವ್ಯಾಪ್ತಿಯಲ್ಲಿ 3,152 ಬಸ್ಸುಗಳು ಕಾರ್ಯಾಚರಣೆಯಾಗಿದ್ದು, ಬಿಎಂಟಿಸಿ ಬಸ್ ನಿಲ್ದಾಣದ ಮೂಲಕ 3,124 ಬಸ್ಸುಗಳು( ಖಾಸಗಿ ಬಸ್ಸು 1,124 ಹಾಗೂ ಮ್ಯಾಕ್ಸಿ ಕ್ಯಾಬ್ 2,000) ಬೆಂಗಳೂರಿನಲ್ಲಿ ಕಾರ್ಯಚರಿಸಿವೆ.
ಇನ್ನು, ಎನ್ಡಬ್ಲ್ಯೂ ಕೆಎಸ್ಆರ್ಟಿಸಿ ವ್ಯಾಪ್ತಿಯಲ್ಲಿ 1,645 ಬಸ್ಗಳು, ಎನ್ಇಕೆಎಸ್ಆರ್ಟಿಸಿ 3,234 ಬಸ್ಗಳ ಓಡಾಟ ನಡೆಸಿವೆ. 22 ಸಾವಿರ ಖಾಸಗಿ ಬಸ್ಗಳ ಪೈಕಿ 11,155 ಬಸ್ಗಳ ಓಡಾಟವಾಗಿದೆ. ನಿನ್ನೆ ತಮಿಳುನಾಡಿನ 300, ಆಂಧ್ರಪ್ರದೇಶದ 125, ತೆಲಂಗಾಣದ 20, ಕೇರಳದ 25 ಬಸ್ಗಳು ಬೆಂಗಳೂರಿನಿಂದ ಕಾರ್ಯಾಚರಣೆ ನಡೆಸಿವೆ.
ಇಂದು ಕೂಡ ಬೆರಳೆಣಿಕೆಯಷ್ಟು ಸಾರಿಗೆ ಬಸ್ಗಳ ಓಡಾಟ:
ವಿವಿಧ ಭಾಗಗಳಿಗೆ ಕೆಎಸ್ಆರ್ಟಿಸಿಯಿಂದ 38 ಬಸ್ಗಳ ಕಾರ್ಯಾಚರಣೆ ಆಗಿದ್ದು, ಬಿಎಂಟಿಸಿ 28, ಎನ್ಇಕೆಆರ್ಟಿಸಿ 54, ಎನ್ಡಬ್ಲ್ಯೂ ಕೆಎಸ್ಆರ್ಟಿಸಿಯ 14 ಬಸ್ಗಳು ಬೆಳಗ್ಗೆ 10 ಗಂಟೆಯವರೆಗೆ ಕಾರ್ಯಾಚರಣೆ ನಡೆಸಿವೆ.
ಇದನ್ನೂ ಓದಿ: ನಾವು ಜಾತಿ ಮೇಲಲ್ಲ, ನೀತಿ ಮೇಲೆ ರಾಜಕಾರಣ ಮಾಡ್ತಿದ್ದೇವೆ: ಡಿಕೆಶಿ