ಬೆಂಗಳೂರು : ರಾಜ್ಯದಲ್ಲಿ ಸೆಪ್ಟೆಂಬರ್ 6ರಿಂದಲೇ 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಶುರುವಾಗುತ್ತಿವೆ. ಈಗಾಗಲೇ ಮೊದಲ ಹಂತವಾಗಿ 9ರಿಂದ ಪಿಯುಸಿ ತರಗತಿಗಳು ಆರಂಭವಾಗಿವೆ. ಇದೀಗ ಎರಡನೇ ಹಂತದಲ್ಲಿ 6, 7, 8ನೇ ತರಗತಿ ಆರಂಭವಾಗುತ್ತಿವೆ. ವಿದ್ಯಾರ್ಥಿಗಳು ತಮ್ಮ ಸ್ಕೂಲ್ ಐಡಿ ತೋರಿಸಿ ಬಿಎಂಟಿಸಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದು.
6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಪಿಯುಸಿ, ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳು ತಮ್ಮ ಶುಲ್ಕ ರಸೀದಿ ಅಥವಾ ಗುರುತಿನ ಚೀಟಿಯೊಂದಿಗೆ ಮುಂದಿನ ಆದೇಶದವರೆಗೆ ಪ್ರಯಾಣಿಸಲು ಬಿಎಂಟಿಸಿ ಅವಕಾಶ ಕಲ್ಪಿಸಿದೆ.
ಇನ್ನು, ಐಟಿಐ, ಡಿಪ್ಲೋಮಾ, ವೃತ್ತಿಪರ, ಪದವಿ(ಪ್ರಥಮ ವರ್ಷ ವಿದ್ಯಾರ್ಥಿಗಳನ್ನು ಹೊರತುಪಡಿಸಿ) ಸ್ನಾತಕೋತ್ತರ,ಪಿಹೆಚ್‌ಡಿ, ತಾಂತ್ರಿಕ ಮತ್ತು ವೈದ್ಯಕೀಯ ಕಾಲೇಜು, ಸಂಜೆ ಕಾಲೇಜು ವಿದ್ಯಾರ್ಥಿಗಳಿಗೆ ಪಾಸಿನ ಅವಧಿಯನ್ನ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ.