ಬೆಂಗಳೂರು: ಸಂಕಷ್ಟದಲ್ಲಿರುವ ರೈತರಿಗಾಗಿ, ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ 2020-21ನೇ ಸಾಲಿನ ಆಯವ್ಯಯದಲ್ಲಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವಿಧಾನ ಪರಿಷತ್ ಸದಸ್ಯ ಎಂ.ಕೆ ಪ್ರಾಣೇಶ್ ಅವರು ಪತ್ರದ ಮೂಲಕ ಮನವಿ ಮಾಡಿದ್ದಾರೆ. ಆ ಮೂಲಕ ಕೃಷಿ ಕ್ಷೇತ್ರವನ್ನು ಅಭಿವೃದ್ಧಿ ದಿಕ್ಕಿನತ್ತ ಕೊಂಡೊಯ್ಯಲು ಸಹಕರಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪತ್ರದಲ್ಲೇನಿದೆ?
ಭಾರತದ ಇತಿಹಾಸದಲ್ಲಿ ರೈತರಿಗಾಗಿ, ಅವರ ಕ್ಷೇಮಕ್ಕಾಗಿ, ಕೃಷಿ ಕ್ಷೇತ್ರದ ವಿಕಾಸಕ್ಕಾಗಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಏಕೈಕ ಮುಖ್ಯಮಂತ್ರಿಗಳು ತಾವು (ಯಡಿಯೂರಪ್ಪ ಅವರು 2011-12ರಲ್ಲಿ ಮಂಡಿಸಿದ ಬಜೆಟ್). ಅಂದು ಮಂಡಿಸಿದ ಬಜೆಟ್ ರೈತ ವರ್ಗಕ್ಕೆ ಹೊಸ ಭರವಸೆಗಳನ್ನು ನೀಡಿತ್ತು.

ಅನ್ನದಾತನ ಹೆಸರಿನಲ್ಲಿ ಮುಖ್ಯಮಂತ್ರಿ ಪದವಿ ಪ್ರಮಾಣ ವಚನ ಸ್ವೀಕರಿಸಿದ ನೀವು, ರೈತ ಪರ ಕಾರ್ಯಕ್ರಮಗಳನ್ನೇ ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದೀರ. ರಾಷ್ಟ್ರಕವಿ ಕುವೆಂಪು ಅವರ 'ಉಳುವಾ ಯೋಗಿಯ ನೋಡಲ್ಲಿ' ಎಂಬ ಪ್ರಸಿದ್ಧ ಕವನವನ್ನು ರೈತ ಗೀತೆಯನ್ನಾಗಿ ಘೋಷಿಸಿದ್ದೀರಾ. ತಾವು ಈವರೆಗೂ ಮಂಡಿಸಿರುವ ಎಲ್ಲಾ ಮುಂಗಡ ಪತ್ರದಲ್ಲೂ ಕೃಷಿ ಮತ್ತು ಕೃಷಿಕನ ಮಹತ್ವ ದೇಶಕ್ಕೆ ಪರಿಚಯಿಸುತ್ತಿದ್ದೀರಾ.
ರೈತರು ಬಿಸಿಲು, ಮಳೆಯೆನ್ನದೆ ಬೆವರು ಸುರಿಸಿ, ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯುವಂತಾಗಬೇಕು. ದೇಶದ ಜಿಡಿಪಿ ಕೊಡುಗೆಯಲ್ಲಿ ಕೃಷಿ ಕ್ಷೇತ್ರದ ಕೊಡುಗೆ ಅಪಾರ. ಕೃಷಿ ವಲಯದ ಬೆಳವಣಿಗೆ ಅಗತ್ಯ ಚಾಲನೆ ಶಕ್ತಿ ಒದಗಿಸಲು, ಕೃಷಿ ಬಗ್ಗೆ ಒಂದು ಗಂಭೀರ ಚರ್ಚೆ ನಡೆಸಲು ಮತ್ತು ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಸಮಗ್ರವಾಗಿ ಪರಿಹರಿಸಲು, ಪೂರಕವಾದ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು 2020-21ನೇ ಸಾಲಿನಲ್ಲಿ ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಿ ಎಂದು ಸಿಎಂಗೆ ಸಲ್ಲಿಸಿರುವ ಪತ್ರದಲ್ಲಿ ವಿನಂತಿಸಿದ್ದಾರೆ.
ಲಾಭದಾಯಕ ಬೆಲೆಯ ನಿರೀಕ್ಷೆಯಲ್ಲಿರುವ ರೈತನ ಆತ್ಮವಿಶ್ವಾಸ ಹೆಚ್ಚಿಸಲು ಮತ್ತು ನೇಗಿಲಯೋಗಿ ಸದಾಕಾಲ ಸುಖವಾಗಿರಲು ಹಾರೈಸುತ್ತೇನೆ ಎಂದು ಪತ್ರದ ಮೂಲಕ ಮತ್ತೆ ರಾಜ್ಯದಲ್ಲಿ ಕೃಷಿ ಬಜೆಟ್ ಪರಿಚಯಿಸಬೇಕು ಎಂದು ಒತ್ತಾಯಿಸಿದ್ದಾರೆ.