ಬೆಂಗಳೂರು: ನಿಗಮ, ಮಂಡಳಿಯಲ್ಲಿ ಹೆಚ್ಚಿನ ಅವಕಾಶ ಹಾಗೂ ಪ್ರಾತಿನಿಧ್ಯ ಪಡೆದಿರುವ ಬಿಎಸ್ವೈ ಬೆಂಬಲಿಗರಿಗೆ ಈಗ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹೌದು, ಸಂಪುಟದಲ್ಲಿ ಸ್ಥಾನ ಸಿಗದ ಅಸಮಾಧಾನ, ಅತೃಪ್ತಿ ಶಮನಕ್ಕೆ ಹಿರಿಯ ಶಾಸಕರಿಗೆ ನೀಡಲಾಗಿದ್ದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೆಲವರ ಮೇಲೆ ಪಕ್ಷದಿಂದ ಒತ್ತಡ ಹೆಚ್ಚುತ್ತಿದೆ. ಬಿಜೆಪಿ ಕಚೇರಿಯಲ್ಲೇ ಈ ನಿರ್ಧಾರವಾಗಿರುವುದರಿಂದ ಬಿಎಸ್ವೈ ಆಪ್ತರ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೈಚಲ್ಲಿ ಕುಳಿತಿದ್ದಾರೆ.
ಓದಿ: ರಮೇಶ್ ಜಾರಕಿಹೊಳಿಗೆ ಕ್ಲೀನ್ ಚಿಟ್ ನೀಡಿದ ಎಸ್ಐಟಿ: ಕೋರ್ಟ್ ಗೆ ಬಿ ರಿಪೋರ್ಟ್ ಸಲ್ಲಿಸಿದ ತನಿಖಾ ದಳ
ಆರ್.ಎಸ್.ಎಸ್. ನಿರ್ದೇಶನ ಪಾಲನೆಗೆ ರಾಜ್ಯ ಬಿಜೆಪಿ ಮುಂದಾಗಿದ್ದು, ನಿಗಮ ಮಂಡಳಿಗಳ ನೇಮಕಾತಿ ಕುರಿತು ಜಗನ್ನಾಥ ಭವನದಲ್ಲಿ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ನಿಗಮ ಮಂಡಳಿಗಳಲ್ಲಿ ಸಂಘ ಪರಿವಾರದ ಹಿನ್ನೆಲೆ, ಪಕ್ಷದ ನಿಷ್ಟಾವಂತ ಕಾರ್ಯಕರ್ತರು, ಸಂಘಟನೆಯಲ್ಲಿ ತೊಡಗಿಕೊಂಡವರಿಗೆ ಮಣೆ ಹಾಕಬೇಕು, ಮುಂಬರಲಿರುವ ಚುನಾವಣೆಯನ್ನ ದೃಷ್ಟಿಯಲ್ಲಿರಿಸಿಕೊಂಡು ನೇಮಕಾತಿ ಮಾಡಬೇಕು ಎನ್ನುವ ಸಂದೇಶವನ್ನು ಕೇಶವ ಕೃಪದಿಂದ ಜಗನ್ನಾಥ ಭವನಕ್ಕೆ ರವಾನಿಸಿದ್ದು, ಈ ಕುರಿತು ಮುಖ್ಯಮಂತ್ರಿಗಳನ್ನು ಕರೆಸಿಕೊಂಡೇ ಜಗನ್ನಾಥ ಭವನದಲ್ಲಿ ಚರ್ಚೆ ನಡೆಸಲಾಗಿದೆ.
ಯಡಿಯೂರಪ್ಪ ಅವಧಿಯಲ್ಲಿ ನೇಮಕಗೊಂಡಿರುವ ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರಿಂದ ರಾಜೀನಾಮೆ ಪಡೆದು ಹೊಸದಾಗಿ ನೇಮಕಾತಿ ಮಾಡಬೇಕು ಎಂದು ಸೂಚ್ಯವಾಗಿ ಕೆಲ ಸೂಚನೆಯನ್ನು ಸಿಎಂ ಬೊಮ್ಮಾಯಿಗೆ ರವಾನಿಸಲಾಗಿದೆ.
ಎರಡು ವರ್ಷ ಪೂರ್ಣಗೊಳಿಸಿರುವವರನ್ನು ಬದಲಿಸಬೇಕು, ಸಂಘಟನಾ ಚತುರತೆ ತೋರದವರನ್ನು ತೆಗೆದುಹಾಕಬೇಕು, ಕೇವಲ ಹೆಸರಿಗೆ ಮಾತ್ರ ಅಧ್ಯಕ್ಷರಾಗಿರುವವರನ್ನು ತೆರವುಗೊಳಿಸಬೇಕು, ಆ ಜಾಗಕ್ಕೆ ಚುನಾವಣಾ ದೃಷ್ಟಿಯಿಂದ ಲಾಭದಾಯಕವಾಗುವ ಮತ್ತು ಸಂಘಟನೆಗೆ ಬಲ ತರಬಲ್ಲವರನ್ನು ನೇಮಕ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.
ಪಕ್ಷದ ಸೂಚನೆ ಪಾಲನೆಗೆ ಮುಂದಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿಗಮ ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷರಲ್ಲಿ ಕೆಲವರಿಗೆ ಈಗಾಗಲೇ ಸೂಚನೆ ನೀಡಿದ್ದು, ಸ್ಥಾನ ತೆರವಿಗೆ ಸಿದ್ಧರಾಗಿ ಎಂದು ತಿಳಿಸಿದ್ದಾರೆ. ಪಕ್ಷದ ಕಡೆಯಿಂದಲೂ ಸಂದೇಶವನ್ನು ಕಳುಹಿಸಿಕೊಡಲಾಗಿದೆ. ರಾಜೀನಾಮೆ ನೀಡುವಂತೆ ಸೂಚನೆ ಬರುತ್ತಿದ್ದಂತೆ ನಿರ್ಗಮಿಸಬೇಕು ಇಲ್ಲದಿದ್ದಲ್ಲಿ ಹುದ್ದೆಯಿಂದ ಬಿಡುಗಡೆಗೊಳಿಸಿ ನೇಮಕ ಮಾಡಬೇಕಾಗಲಿದೆ ಎನ್ನುವ ಮಾಹಿತಿಯನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.
ಯಡಿಯೂರಪ್ಪ ಕೇಂದ್ರಿತ ನಿಗಮ ಮಂಡಳಿಗಳ ನೇಮಕಾತಿಯನ್ನು ಪಕ್ಷ ಕೇಂದ್ರಿತ ವ್ಯವಸ್ಥೆಗೆ ತರಬೇಕು ಎನ್ನುವ ಚಿಂತನೆಯೊಂದಿಗೆ ಆರ್ಎಸ್ಎಸ್ ಕಚೇರಿಯಿಂದ ಬಂದ ನಿರ್ದೇಶನದಂತೆ ರಾಜ್ಯ ಬಿಜೆಪಿ ನಾಯಕರು, ಸಿಎಂ ಬಸವರಾಜ ಬೊಮ್ಮಾಯಿಗೆ ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರಿಂದ ರಾಜೀನಾಮೆ ಪಡೆದು ಹೊಸದಾಗಿ ನೇಮಕಾತಿ ಮಾಡಬೇಕು ಎಂದು ಇತ್ತೀಚೆಗೆ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತಿಳಿಸಿದ್ದಾರೆ.
ಜೊತೆಗೆ ಪಟ್ಟಿಯನ್ನು ಸಿದ್ಧಪಡಿಸಿ ಕೊಡುವುದಾಗಿ ಹೇಳಿದ್ದಾರೆ. ಇದೀಗ ಜಗನ್ನಾಥ ಭವನದಲ್ಲಿ ಸಿದ್ಧವಾದ ಪಟ್ಟಿ ಸಿಎಂ ಬೊಮ್ಮಾಯಿ ಕೈ ಸೇರಿದ್ದು, ಸಂಘ ಪರಿವಾರ, ಬಿಜೆಪಿ ಸಿದ್ಧಪಡಿಸಿರುವ ಪಟ್ಟಿಯೊಂದಿಗೆ ಬೊಮ್ಮಾಯಿ ದೆಹಲಿಗೆ ಹಾರಲಿದ್ದಾರೆ. ಹೈಕಮಾಂಡ್ ಜೊತೆ ಮಾತುಕತೆ ನಡೆಸಿ ಪಟ್ಟಿಗೆ ಒಪ್ಪಿಗೆ ಪಡೆದುಕೊಂಡು ಬರಲಿದ್ದಾರೆ ಎನ್ನಲಾಗುತ್ತಿದೆ.
ಓದಿ: ಬೆಳಗಾವಿ: ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳಿಗೆ PSI ಖಡಕ್ ವಾರ್ನಿಂಗ್
ನಾಯಕತ್ವ ಬದಲಾವಣೆ ನಂತರ ರಾಜ್ಯದ 98 ನಿಗಮ ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ನಾಮ ನಿರ್ದೇಶನಗೊಂಡಿರುವ 116 ನಿರ್ದೇಶಕರು ಮತ್ತು ಸದಸ್ಯರಲ್ಲಿ ಹಲವರನ್ನು ಬದಲಿಸಬೇಕು ಎನ್ನುವ ನಿರ್ಧಾರವಾಗಿದೆ.
ಬೊಮ್ಮಾಯಿ ಪಟ್ಟ ಅಲಂಕರಿಸಿದ ತಿಂಗಳೊಳಗೆ ನಿಗಮ ಮಂಡಳಿಗಳ ಸರ್ಜರಿಗೆ ನಿರ್ಧರಿಸಲಾಗಿತ್ತಾದರೂ ಕಡೆ ಕ್ಷಣದಲ್ಲಿ ನಿರ್ಧಾರ ಬದಲಿಸಲಾಗಿತ್ತು. ಆದರೆ, ಏಕಾಏಕಿ ಎಲ್ಲರ ರಾಜೀನಾಮೆ ಪಡೆದು ಹೊಸದಾಗಿ ನೇಮಕಾತಿ ಮಾಡಿದಲ್ಲಿ ಆಂತರಿಕ ಅಸಮಾಧಾನ ಸ್ಫೋಟಗೊಳ್ಳಲಿದೆ. ಯಡಿಯೂರಪ್ಪ ಕೂಡ ಕುಪಿತಗೊಳ್ಳಲಿದ್ದಾರೆ ಎನ್ನುವ ಕಾರಣಕ್ಕೆ ಮುಂದೂಡಿಕೆ ಮಾಡಲಾಗಿತ್ತು.
ಇದೀಗ ಯಡಿಯೂರಪ್ಪ ಅವರಿಗೆ ಮಾಹಿತಿ ನೀಡಿಯೇ ನಿಗಮ ಮಂಡಳಿ ಸರ್ಜರಿಗೆ ಪಕ್ಷ ಮುಂದಾಗಿದೆ. ಪಕ್ಷದ ನಿರ್ಧಾರದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಬ್ಬರೂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಹೊಸದಾಗಿ ನೇಮಕಾತಿ ಮಾಡುವ ಪ್ರಸ್ತಾಪಕ್ಕೆ ಒಪ್ಪಿಗೆ ಪಡೆದುಕೊಂಡಿದ್ದಾರೆ.
ಓದಿ: ಕಾಲೇಜು ಆವರಣದಲ್ಲೇ ವಿದ್ಯಾರ್ಥಿಗಳ ರೋಮ್ಯಾನ್ಸ್.. ಇವರಿಗೆ ಹೇಳೋರಿಲ್ಲ, ಕೇಳೋರಿಲ್ಲ!
ನಿಗಮ ಮಂಡಳಿಗಳಿಗೆ ಹೊಸದಾಗಿ ನೇಮಕಾತಿ ಮಾಡುವ ಕುರಿತು ಹಾಲಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಮಾಹಿತಿ ನೀಡಲಾಗಿದ್ದು, ಬಹಿರಂಗವಾಗಿ ಕೇಶವ ಕೃಪಾ ನಿರ್ಧಾರವನ್ನು ವಿರೋಧಿಸಲು ಯಾರೂ ಸಿದ್ಧರಿಲ್ಲ. ಅಸಮಧಾನ ವ್ಯಕ್ತಪಡಿಸಲೂ ಮುಂದಾಗುತ್ತಿಲ್ಲ.
ಆದರೆ, ಯಡಿಯೂರಪ್ಪ ನಿವಾಸ, ಬೊಮ್ಮಾಯಿ ನಿವಾಸಕ್ಕೆ ಅಲೆದಾಡ ಮಾತ್ರ ಮುಂದುವರೆಸಿದ್ದು, ಕುರ್ಚಿ ಉಳಿಸಿಕೊಳ್ಳಲು ಸರ್ಕಸ್ ಮಾಡುತ್ತಿದ್ದಾರೆ. ಅಂತಿಮವಾಗಿ ಹೈಕಮಾಂಡ್ ನಿರ್ಧಾರದ ಮೇಲೆ ನಿಗಮ ಮಂಡಳಿ ಅಧ್ಯಕ್ಷ ಉಪಾಧ್ಯಕ್ಷರ ಭವಿಷ್ಯ ನಿಂತಿದ್ದು, ಎಲ್ಲರೂ ಸಿಎಂ ದೆಹಲಿ ಯಾತ್ರೆಯತ್ತ ದೃಷ್ಟಿ ಹರಿಸಿದ್ದಾರೆ.