ಆನೇಕಲ್: ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯೆ ಮನೆ ಮೇಲೆ ರೌಡಿಗಳ ಗುಂಪೊಂದು ಕಲ್ಲು, ಬಿಯರ್ ಬಾಟಲಿ ಹಾಗೂ ಮಾರಕಾಸ್ತ್ರಗಳಿಂದ ದಾಂಧಲೆ ನಡೆಸಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.
ರಾತ್ರಿ 11ರ ಸುಮಾರಿಗೆ ಆನೇಕಲ್ ತಾಲೂಕಿನ ಕೂನಿಮಡಿವಾಳ ಗ್ರಾಮದ ಮಂಜುಳಾ ಎಂಬುವವರ ಮನೆಯ ಮೇಲೆ ಏಕಾಏಕಿ ನಾಲ್ಕಾರು ಯುವಕರ ತಂಡ ಮುಖಕ್ಕೆ ಮಾಸ್ಕ್ ಧರಿಸಿ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಅಲ್ಲದೆ ತಡೆಯಲು ಬಂದ ಮಂಜುಳಾ ಅವರ ಮಗ ಮನೋಜ್ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಕಾಲೋನಿಯ ಜನರು ಬರುವಷ್ಟರಲ್ಲಿ ಗ್ಯಾಂಗ್ ಸ್ಥಳದಿಂದ ಕಾಲ್ಕಿತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆಗೆ ಕೂನಿ ಮಡಿವಾಳದ ರೌಡಿಶೀಟರ್ ಶಶಿ, ತಟ್ಟನಹಳ್ಳಿ ಜಯಂತ್ ಮತ್ತು ಎಸ್.ಮಡಿವಾಳದ ಚಂದ್ರು ಕಾರಣ ಎಂದು ಸಂತ್ರಸ್ತೆ ದೂರಿದ್ದಾರೆ.
ಘಟನೆಯ ಹಿನ್ನೆಲೆ: ಕೂನಿ ಮಡಿವಾಳ ಧರ್ಮಸ್ಥಳದ ಸಂಘದ ನೆರವಿನಿಂದ ಕೆರೆಯ ಹೂಳೆತ್ತುವ ಕೆಲಸಕ್ಕೆ ಒಡಂಬಡಿಕೆಯಾಗಿತ್ತು. ಹಾಗೆಯೇ ಈ ಕೆರೆಯ ಮಣ್ಣಿಗೆ ಇಟ್ಟಿಗೆ ಕಾರ್ಖಾನೆಗಳಿಂದ ಬೇಡಿಕೆಯಿತ್ತು. ಈ ಬೇಡಿಕೆಯ ಹಗ್ಗಜಗ್ಗಾಟದ ನೆಪದಲ್ಲಿ ಕೂನಿಮಡಿವಾಳದ ನೂತನ ಸದಸ್ಯೆ ಮಂಜುಳಾ ಹಾಗೂ ಹೂಳೆತ್ತುವ ಗುತ್ತಿಗೆದಾರರಿಗೆ ತಗಾದೆಯಾದ ಪರಿಣಾಮ ದಾಂಧಲೆ ನಡೆದಿದೆ ಎಂದು ಗ್ರಾಮದ ಹಿರಿಯರೊಬ್ಬರು ತಿಳಿಸಿದ್ದಾರೆ.
ರೌಡಿಶೀಟರ್ ಶಶಿ ಹಾಗೂ ಮಂಜುಳಾ ಅವರ ಸಂಬಂಧಿಗಳ ನಡುವೆ ಈ ಮುಂಚೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಮೂರು ಪ್ರಕರಣಗಳಲ್ಲಿ ಶಶಿ ಆರೋಪಿಯಾಗಿದ್ದಾನೆ. ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಾಗಿತ್ತು. ಕೆಲವು ಪ್ರಕರಣಗಳಲ್ಲಿ ರಾಜಿಯೂ ನಡೆದಿತ್ತು ಎಂದು ತಿಳಿದು ಬಂದಿದೆ.
ಶಶಿ ಗ್ಯಾಂಗ್ ಕಾರಿನ ಗಾಜು ಪಡಿಗಟ್ಟುವ ಸಂದರ್ಭದಲ್ಲಿ ಮನೋಜ್ ಕೈಗೆ ಗಾಯವಾಗಿದೆ ಎಂದು ಪೊಲೀಸ್ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ಮೇಲ್ನೋಟಕ್ಕೆ ತಿಳಿದಿದೆ. ಆನೇಕಲ್ ಉಪವಿಭಾಗ ಡಿವೈಎಸ್ಪಿ ಹೆಚ್.ಎಂ.ಮಹದೇವಪ್ಪ, ಸಿಐ ಕೃಷ್ಣ, ಎಸ್ಐ ಮಧುಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆದಿದೆ.