ಬೆಂಗಳೂರು: ಈ ಬಾರಿ ಮತ್ತೆ ರಾಜ್ಯದಲ್ಲಿ ವರಣನ ಅಬ್ಬರ ಹೆಚ್ಚಾಗಿದೆ. ಕಳೆದ ಬಾರಿಯ ಅತಿವೃಷ್ಟಿಯಿಂದ ಮೇಲೇಳುವ ಮುನ್ನವೇ ಈ ವರ್ಷ ಮತ್ತೊಂದು ನೆರೆಗೆ ರಾಜ್ಯ ಸಾಕ್ಷಿಯಾಗಿದೆ. ಮಳೆಯ ಆರ್ಭಟದಿಂದ ಉಂಟಾದ ಪ್ರವಾಹಕ್ಕೆ ಹಲವೆಡೆ ಮತ್ತೆ ಕೋಟ್ಯಂತರ ಮೌಲ್ಯದ ರಸ್ತೆ, ಸೇತುವೆಗಳು ಕೊಚ್ಚಿ ಹೋಗಿವೆ. ರಾಜ್ಯಾದ್ಯಂತ ನೆರೆಪಾಲಾದ ಜಿಲ್ಲಾವಾರು ರಸ್ತೆ, ಸೇತುವೆಗಳ ಸಮಗ್ರ ವರದಿ ಇಲ್ಲಿದೆ.
ರಾಜ್ಯದೆಲ್ಲೆಡೆ ಈ ಬಾರಿಯೂ ವರುಣ ಅಬ್ಬರಿಸಿದ್ದಾನೆ. ಪ್ರವಾಹ, ಭೀಕರ ಮಳೆಯಿಂದಾಗಿ ಲೋಕೋಪಯೋಗಿ ಇಲಾಖೆ ರಸ್ತೆ, ಸೇತುವೆಗಳು, ಕಟ್ಟಡಗಳು ಕೊಚ್ಚಿ ಹೋಗಿವೆ. ಪಿಡಬ್ಲ್ಯೂಡಿ ವ್ಯಾಪ್ತಿಯ 2,036 ಕೋಟಿ ಮೊತ್ತದ ರಸ್ತೆ, ಸೇತುವೆ ಹಾಗೂ ಕಟ್ಟಡಗಳು ಹಾನಿಗೊಳಗಾಗಿವೆ. ತುರ್ತಾಗಿ ದುರಸ್ತಿ ಕಾಮಗಾರಿಗೆ ಸುಮಾರು 481 ಕೋಟಿ ರೂ. ಅನುದಾನ ಅಗತ್ಯವಿದೆ.
ಲೋಕೋಪಯೋಗಿ ಇಲಾಖೆಯ ಅಂಕಿ-ಅಂಶದ ಪ್ರಕಾರ ಉತ್ತರ 1,437 ಕೋಟಿ, ಕೇಂದ್ರ 315 ಕೋಟಿ, ದಕ್ಷಿಣ 181 ಕೋಟಿ, ಈಶಾನ್ಯ ವಲಯದಲ್ಲಿ 71 ಕೋಟಿ ರೂಪಾಯಿ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ 34.97 ಕೋಟಿ ರೂಪಾಯಿ ವೆಚ್ಚದ ರಸ್ತೆ, ಸೇತುವೆ ಹಾಗೂ ಕಟ್ಟಡಗಳು ಮಣ್ಣುಪಾಲಾಗಿವೆ. ಒಟ್ಟು 22.38 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಹಾನಿಗೀಡಾಗಿದೆ.
ರಸ್ತೆಗಳು ಗುಂಡಿಗಳಂತಾಗಿವೆ. ಕೋಟ್ಯಂತರ ರೂಪಾಯಿ ಅನುದಾನ ಪಡೆಯುವ ರಸ್ತೆಗಳ ಪಾಡು ಹೀಗೇಕೆ ಎಂಬ ಪ್ರಶ್ನೆಗಳು ಉದ್ಭವವಾಗುತ್ತಿದೆ. ಅಧಿಕಾರಿಗಳು ಶೀಘ್ರ ಅಭಿವೃದ್ಧಿಪಡಿಸಬೇಕು ಅಂತಾ ತೊಂದರೆಗೀಡಾದ ಜನ ಒತ್ತಾಯಿಸಿದ್ದಾರೆ.