ಬೆಂಗಳೂರು: ರಾಜ್ಯದಲ್ಲಿ 2017ರಿಂದ ಈವರೆಗೆ ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗಳಿಗೆ ಕಾರಣಗಳೇನು ಹಾಗೂ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಯಾವ ನೆರವು ನೀಡಲಾಗಿದೆ ಎಂಬುದರ ವಿವರ ನೀಡುವಂತೆ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ರೈತರಿಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ನೀಡಬೇಕಿದ್ದ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ಅಖಂಡ ಕರ್ನಾಟಕ ರೈತ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಕ್ಲಿಫ್ಟನ್ ಡಿ. ರೊಜಾರಿಯೋ ವಾದ ಮಂಡಿಸಿ, ರೈತರಿಗೆ ಸಾಲ ನೀಡುವ ಸಂದರ್ಭದಲ್ಲಿಯೇ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ನೀಡುವ ವಿಮೆಗೆ ಹಣ ಕಡಿತ ಮಾಡಲಾಗಿದೆ. ಆದರೆ ರೈತರು ಬೆಳೆ ನಷ್ಟ ಅನುಭವಿಸಿದ್ದರೂ ಈವರೆಗೆ ಪರಿಹಾರ ನೀಡಿಲ್ಲ. ರೈತರ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ಶಹಾಪುರ ತಾಲೂಕು ಒಂದರಲ್ಲಿಯೇ 98 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುಜಾರಾತ್ ಮತ್ತು ಮಹಾರಾಷ್ಟ್ರ ಬಳಿಕ ಅತಿ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ರಾಜ್ಯ ನಮ್ಮದಾಗಿದೆ ಎಂದು ವಿವರಿಸಿದರು.
ಹೇಳಿಕೆ ದಾಖಲಿಸಿಕೊಂಡ ಪೀಠ, ರಾಜ್ಯದಲ್ಲಿ 2017ರಿಂದ 2020ರವರೆಗೆ ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ಕಾರಣಗಳೇನು ಹಾಗೂ ಮೃತ ರೈತರ ಕುಟುಂಬಗಳಿಗೆ ಯಾವ ನೆರವು ನೀಡಲಾಗಿದೆ ಎಂಬುದರ ವಿವರ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತು. ಹಾಗೆಯೇ ಶಹಾಪುರ ತಾಲೂಕಿನಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಸಂಬಂಧ ತಹಶೀಲ್ದಾರ್ ಅಥವಾ ಎಸಿ ಹಂತದ ಅಧಿಕಾರಿ ಮೂಲಕ ಸರ್ವೆ ನಡೆಸಬೇಕು. ರೈತರ ಆತ್ಮಹತ್ಯೆಗೆ ಕಾರಣಗಳು ಹಾಗೂ ಪರಿಹಾರಗಳನ್ನು ವಿತರಿಸಿರುವ ಕುರಿತು ವರದಿ ಸಿದ್ಧಪಡಿಸಿ ಸಲ್ಲಿಸಬೇಕು ಎಂದು ನಿರ್ದೇಶಿಸಿತು.
ಅಲ್ಲದೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ಪರಿಹಾರ ನೀಡುವ ಕುರಿತು ರೈತರು ಹಣ ಪಾವತಿಸಿರುವ ಹಾಗೂ ಪರಿಹಾರ ಸಿಗದಿರುವ ಕುರಿತು ವರದಿ ಸಲ್ಲಿಸಬೇಕು. ರೈತರಿಗೆ ಪರಿಹಾರ ಸಿಗದಿರುವ ದೂರಿನ ಬಗ್ಗೆ ಸರ್ಕಾರವೇ ಪರಿಶೀಲಿಸಬೇಕು ಅಥವಾ ಜಿಲ್ಲಾ ದೂರು ಇತ್ಯರ್ಥ ಸಮಿತಿಗೆ ಶಿಫಾರಸು ಮಾಡಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಜನವರಿ 13ಕ್ಕೆ ಮುಂದೂಡಿತು.