ಬೆಂಗಳೂರು: ನಾನು ಏನೂ ತಪ್ಪು ಮಾಡಿಲ್ಲ. ಇನ್ನು 10 ಸಿಡಿ ರಿಲೀಸ್ ಮಾಡಲಿ ನಾನು ಹೆದರೋದಿಲ್ಲ, ಎಲ್ಲವನ್ನು ಎದುರಿಸುತ್ತೇನೆ. ನಾನು ನಿರ್ದೋಷಿ ಆಗಿ ಬರುತ್ತೇನಿ,ಷಡ್ಯಂತ್ರ ರೂಪಿಸಿದವರನ್ನು ಜೈಲಿಗೆ ಕಳುಹಿಸದೇ ಬಿಡಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಇದು ದೊಡ್ಡ ಷಡ್ಯಂತ್ರ, ದೂರು ಕೊಟ್ಟ ಅರ್ಧ ಗಂಟೆ ನಂತರ ಸಿಡಿ ಬರುತ್ತದೆ. ನನ್ನ ತೇಜೋವಧೆ ಮಾಡಲು ಹೀಗೆ ಮಾಡುತ್ತಿದ್ದಾರೆ. ಇನ್ನು 10 ಸಿಡಿ ಬಂದರೂ ಎದುರಿಸುತ್ತೇನೆ ಎಂದರು.
ಆಕೆ ಯಾರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಲಿ. ನಾವು ಎವಿಡೆನ್ಸ್ ಕಲೆ ಹಾಕಿದ್ದೇವೆ. ನಾನು ಯಾವುದೇ ತಪ್ಪು ಮಾಡಿಲ್ಲ, ತಪ್ಪು ಮಾಡೋರನ್ನ ಜೈಲಿಗೆ ಕಳುಹಿಸದೇ ಬಿಡೊಲ್ಲ. ದೊಡ್ಡ ಹೈ ಪ್ರೊಫೈಲ್ ಕೇಸ್ ಇದೆ. ನಿಮಗೂ ನಾಳೆ ಇಂತಹ ಆರೋಪ ಬರಬಹುದು. ನನ್ನ ಜೇಬಿನಲ್ಲಿ ದಾಖಲೆಗಳು ಇವೆ. ಅದನ್ನ ರಿಲೀಸ್ ಮಾಡಿದರೆ ನಿಮಗೂ ಶಾಕ್ ಆಗುತ್ತದೆ. ಕಾನೂನು ಮೂಲಕ ಹೋರಾಟ ಮಾಡುತ್ತೇನೆ. ಮಹಾ ನಾಯಕನ ಬಗ್ಗೆ ಎಲ್ಲರ ಮುಂದೆ ಗೊತ್ತಾಗಲಿದೆ ಎಂದರು.
ಇದನ್ನೂ ಓದಿ: ಮತ್ತೊಂದು ವಿಡಿಯೋ ಹರಿಬಿಟ್ಟ ಸಿಡಿ ಲೇಡಿ: ಪೋಷಕರಿಗೆ ರಕ್ಷಣೆ ಕೊಡಲು ಕೈ ನಾಯಕರಿಗೆ ಮನವಿ
ಆರೋಪ ಮಾಡುತ್ತಿರೋ ಯುವತಿ ಎದುರು ಬಂದು ಹೇಳಲಿ. ಇಷ್ಟು ದಿನ ಯಾಕೆ ಆಕೆ ಮಾತಾಡಿಲ್ಲ? ಕಾಂಗ್ರೆಸ್ ನಾಯಕರ ಸಹಕಾರ ಕೇಳ್ತಾಳೆ. ಇದನ್ನ ನೀವೇ ಅರ್ಥ ಮಾಡಿಕೊಳ್ಳಿ ಎಷ್ಟು ದೊಡ್ಡ ಪ್ಲ್ಯಾನ್ ಮಾಡಿದ್ದಾರೆ ಎಂದು. ದೊಡ್ಡ ಷಡ್ಯಂತ್ರ ನಡೆದಿದೆ. ಸಿಡಿ ಹುಡುಗಿ ಮೊದಲ ವಾಯ್ಸ್ ಹೇಗಿತ್ತು, ಈಗ ರಿಲೀಸ್ ಆಗಿರೋ ಸಿಡಿಯಲ್ಲಿ ವಾಯ್ಸ್ ಹೇಗಿದೆ ನೀವೇ ಯೋಚನೆ ಮಾಡಿ. ಸಮಯ ಬಂದಾಗ ನಾನು ನನ್ನ ಬಳಿ ಇರೋ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದರು.
ಸದನದಲ್ಲಿ ಸಿಡಿ ವಿಷಯ ಪ್ರಸ್ತಾಪ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಜಾರಕಿಹೊಳಿ, ಮೊನ್ನೆವರೆಗೂ ವಿಪಕ್ಷ ಹಾಗೂ ಸಿದ್ದರಾಮಯ್ಯ ಬಗ್ಗೆ ನನಗೆ ಅಪಾರ ಗೌರವ ಇತ್ತು. ರೇಪ್ ಕೇಸ್ ಹಾಕಿ ಅಂತ ಹೇಳಿದ್ದಾರೆ. ಅದನ್ನ ಕೇಳಿ ನನಗೆ ಶಾಕ್ ಆಯಿತು. ಯಾಕೆ ಅವರು ಹಾಗೆ ಹೇಳಿದರು ಅಂತ ಗೊತ್ತಿಲ್ಲ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಬೇಸರ ವ್ಯಕ್ತಪಡಿಸಿದರು.