ಬೆಂಗಳೂರು: ಅಬ್ಬಾ ಅಂತೂ ಇಂತೂ ಎಕ್ಸಾಂ ಮುಗಿತು.. ಇನ್ನು ಏನ್ ಇದ್ದರೂ ರಜೆ ಮಜಾ ಅಂತ ಖುಷಿಯಿಂದ ಎಕ್ಸಾಂ ಹಾಲ್ ನಿಂದ ವಿದ್ಯಾರ್ಥಿಗಳು ಹೊರಗೆ ಬರುತ್ತಿದ್ದ ದೃಶ್ಯ ಕಂಡು ಬಂತು.
ಹೌದು ಇಂದು ದ್ವಿತೀಯ ಪಿಯುಸಿ ಪರೀಕ್ಷೆಗೆ ತೆರೆ ಬಿದ್ದಿದೆ. ಮಾರ್ಚ್ 1ರಿಂದ ಶುರುವಾಗಿದ್ದ ಪಿಯು ಪರೀಕ್ಷೆಯು ಇಂದು ಮುಗಿದಿದೆ. ಕೊನೆಯ ದಿನವಾದ ಇಂದು ಇಂಗ್ಲೀಷ್ ಪರೀಕ್ಷೆ ಬರೆದು, ಖುಷಿಯಲ್ಲಿ ವಿದ್ಯಾರ್ಥಿಗಳು ಹೊರ ಬಂದರು.
ಒಂದು ಕಡೆ ಪರೀಕ್ಷೆ ಮುಗಿದ ಖುಷಿಯಾದರೆ ಮತ್ತೊಂದು ಕಡೆ ಪರೀಕ್ಷಾ ಫಲಿತಾಂಶದ ಗಡಿಬಿಡಿ ಶುರುವಾಗಿದೆ. ಇದೇ ಮಾರ್ಚ್ 23 ರಿಂದ ಪರೀಕ್ಷಾ ಮೌಲ್ಯಮಾಪನದ ಕೆಲಸಗಳು ಶುರುವಾಗಲಿದೆ. ಪರೀಕ್ಷಾ ಫಲಿತಾಂಶವೂ ಏಪ್ರಿಲ್ ಕೊನೆಯ ವಾರದಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ.
ಜೀವಶಾಸ್ತ್ರ ಪ್ರಶ್ನೆ ಪತ್ರಿಕೆಯಲ್ಲಿ ಪಠ್ಯದಲ್ಲಿ ಇಲ್ಲದಿರುವ ಪ್ರಶ್ನೆಗಳನ್ನ ಕೇಳಲಾಗಿದೆ ಎಂಬ ದೂರುಗಳು ಕೇಳಿ ಬಂದಿದ್ದವು. ಹೀಗಾಗಿ, ಈ ಸಂಬಂಧ ಸಮಿತಿ ಸಭೆಯನ್ನು ನಿಯೋಜನೆ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು.
ಇಂದು ಸಮಿತಿಯು ವರದಿ ನೀಡಿದ್ದು, ಪಠ್ಯದಿಂದ ಆಚೆ ಯಾವುದೇ ಪ್ರಶ್ನೆಗಳನ್ನು ಕೇಳಿಲ್ಲ. ಎಲ್ಲವೂ ಪಠ್ಯದಲ್ಲಿ ಇರುವ ಪ್ರಶ್ನೆಗಳನ್ನೇ ಕೇಳಲಾಗಿದೆ ಎಂದು ಪಿಯು ಬೋರ್ಡ್ ನಿರ್ದೇಶಕ ಜಾಫರ್ ತಿಳಿಸಿದರು. ಇನ್ನು ಯಾವುದೇ ಕಾರಣಕ್ಕೂ ಗ್ರೇಸ್ ಮಾರ್ಕ್ಸ್ ಕೊಡುವ ಅಗತ್ಯ ಇರೋದಿಲ್ಲವೆಂದು ಸ್ಪಷ್ಟ ಪಡಿಸಿದರು.