ಬೆಂಗಳೂರು: ದೆಹಲಿಯಲ್ಲಿನ ಅಪಾರ್ಟ್ಮೆಂಟ್ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಪ್ರಕರಣದಲ್ಲಿ ತಮಗೆ ವಿಮುಕ್ತಿ ನೀಡುವಂತೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ಮನವಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಲಯ ನಿರಾಕರಿಸಿದೆ.
ನ್ಯಾಯಮೂರ್ತಿ ರಾಮಚಂದ್ರ ಹುದ್ದಾರ ಅವರು ಡಿಕೆಶಿ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಇದರಿಂದ ಡಿ.ಕೆ. ಶಿವಕುಮಾರ್, ಆದಾಯ ತೆರಿಗೆ ಇಲಾಖೆ ದಾಳಿಗೆ ಸಂಬಂಧಿಸಿದ ಪ್ರಕರಣವನ್ನ ಎದುರಿಸಬೇಕಿದೆ.
ಬೆಂಗಳೂರು , ದೆಹಲಿ , ಬಿಡದಿ ಕನಕಪುರಗಳಲ್ಲಿ ಸಚಿವ ಡಿಕೆಶಿಗೆ ಸೇರಿದ ಮನೆ , ಕಚೇರಿ ಮತ್ತು ಅವರ ಆಪ್ತರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಈ ಹಿಂದೆ ದಾಳಿನಡೆಸಿತ್ತು. ಈ ಸಂಬಂಧ ನಾಲ್ಕು ಪ್ರಕರಣಗಳನ್ನು ಡಿಕೆಶಿ ವಿರುದ್ದ ದಾಖಲಿಸಲಿಸಿತ್ತು. ಈ ಪೈಕಿ ಮೂರು ಪ್ರಕರಣದಲ್ಲಿ ಈಗಾಗಲೆ ಡಿಕೆಶಿಗೆ ನ್ಯಾಯಲಯ ರಿಲೀಫ್ ನೀಡಿದೆ. ಆದರೆ ದೆಹಲಿಯಲ್ಲಿ ನಡೆದ ಐಟಿ ದಾಳಿ ಸಂಬಂಧ ಅವರು ಆದಾಯ ತೆರಿಗೆ ಇಲಾಖೆಯ ತನಿಖೆಗೆ ಒಳಪಡಬೇಕಾಗಿದೆ.
ಈ ಬಗ್ಗೆ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಡಿಕೆಶಿ ಪರ ವಕೀಲರು, ಸಾಕ್ಷಿಗಳ ಹೇಳಿಕೆ ಆಧರಿಸಿ ಐಟಿ ಇಲಾಖೆ ದೂರು ದಾಖಲಿಸಿದೆ. ಐಟಿ ರಿಟರ್ನ್ಸ್ ಸಲ್ಲಿಸುವ ಮೊದಲೆ ದಾಳಿ ಮಾಡಲಾಗಿದೆ. ಆಸ್ತಿ ಘೋಷಣೆಗೆ ಐಟಿ ಸಮಯ ನೀಡಿಲ್ಲ. ಐಟಿ ಇಲಾಖೆ ಡೆಪ್ಯೂಟಿ ಡೈರಕ್ಟರ್ಗೆ ದೂರು ನೀಡುವ ಅಧಿಕಾರವೇ ಇಲ್ಲ ಎಂದು ವಾದ ಮಂಡಿಸಿ ನ್ಯಾಯಲಯದ ಗಮನ ಸೆಳೆದ್ರು.
ದೆಹಲಿಯ ಅಪಾರ್ಟ್ಮೆಂಟ್ನಲ್ಲಿ ಸಿಕ್ಕ ಹಣದಲ್ಲಿ 40 ಲಕ್ಷ ಕೃಷಿಯಿಂದ ಬಂದ ಆದಾಯವಾಗಿದೆ. ದಾಳಿ ವೇಳೆ ಪತ್ತೆಯಾದ 8.56 ಕೋಟಿ ರೂಪಾಯಿಗೂ ಡಿಕೆಶಿಗೂ ಯಾವುದೇ ಸಂಬಂಧವಿಲ್ಲ ಎಂದು ವಕೀಲರು ವಾದಿಸಿದರು.
ಐಟಿ ಪರ ವಕೀಲ ಅಡಿಷನಲ್ ಸಾಲಿಟರ್ ಜನರಲ್ ಪ್ರಭುಲಿಂಗ ನಾವಡಗಿ ವಾದ ಮಂಡಿಸಿ, ಈ ಪ್ರಕರಣದಲ್ಲಿ ಹವಾಲ ಮೂಲಕ ಹಣ ವರ್ಗಾವಣೆಯಾಗಿದ್ದು, ಕೋಡ್ ವರ್ಡ್ ಬಳಸಿರುವುದು ಪತ್ತೆಯಾಗಿದೆ. ಸುನಿಲ್ ಶರ್ಮಾ ಅಪಾರ್ಟ್ಮೆಂಟ್ನಲ್ಲಿ ಡಿ.ಕೆ. ಶಿವಕುಮಾರ್ ಒಂದು ರೂಮ್ ಬಳಸುತ್ತಿದ್ದರ. ಹಣ ಸಾಗಾಣಿಕೆ ಮಾಡಿದ್ದ ಸುನಿಲ್ ಶರ್ಮಾ ಈ ಹಣ ಡಿಕೆಶಿಗೆ ಸೇರಿದ್ದು ಎಂದು ಹೇಳಿದ್ದಾರೆ . ಅಷ್ಟೇ ಅಲ್ಲದೆ, ಡಿಕೆಶಿ ಅವರ ಅಪಾರ್ಟ್ಮೆಂಟ್ ಹಾಗೂ ಮನೆಯಲ್ಲಿ ಸಿಕ್ಕ ಹಣ ಹಾಗೂ ಆಭರಣಗಳಿಗೆ ಸಮರ್ಪಕ ದಾಖಲೆಗಳಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ರು.
ಹಣ ವಶಪಡಿಸಿಕೊಂಡ ನಂತರ 120 ದಿನ ಕಾಲಾವಕಾಶ ನೀಡಿದರೂ ಸಮರ್ಪಕ ದಾಖಲೆ ಸಲ್ಲಿಸಿಲ್ಲ. ಆದಾಯ ತೆರಿಗೆ ಇಲಾಖೆಯು ಡಿಕೆಶಿ ಕುಮಾರು ವಿರುದ್ದ ದಾಖಲಿಸಿರುವ ದೂರು ಕ್ರಮಬದ್ಧವಾಗಿದೆ.
ಈ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆಯು ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 120–‘ಬಿ’ (ಅಪರಾಧಿಕ ಒಳಸಂಚು) ಅನುಸಾರ ದಾಖಲಿಸಿರುವ ದೂರು ಸರಿಯಾಗಿಯೇ ಇದೆ. ಇದರಲ್ಲಿ ಯಾವುದೇ ಲೋಪವಿಲ್ಲ ಎಂದು ವಕೀಲರು ವಾದಿಸಿದರು.
ಈ ವಾದವನ್ನು ನ್ಯಾಯಾಧೀಶರು ಪುರಸ್ಕರಿಸಿ ಡಿಕೆಶಿ ಅರ್ಜಿ ವಜಾ ಮಾಡಿದ್ದಾರೆ. ಇದರಿಂದ ಸಚಿವ ಶಿವಕುಮಾರ್ ಸೇರಿ ಆರೋಪಿಗಳಾದ ಸಚಿನ್ ನಾರಾಯಣ್, ಸುನಿಲ್ ಕುಮಾರ್ ಶರ್ಮ, ಎನ್. ರಾಜೇಂದ್ರ ಮತ್ತು ಆಂಜನೇಯ ಹನುಮಂತಯ್ಯ ವಿರುದ್ಧ ಐಟಿ ತನಿಖೆ ಮುಂದುವರೆಯಲಿದೆ.
ಡೈಲಿ ಮಿಲ್ಕ್ ತಂದಿದ್ರು ಮಾಜಿ ಮೇಯರ್
ಐಟಿ ದಾಳಿ ಪ್ರಕರಣದಲ್ಲಿ ಸಚಿವ ಡಿಕೆ ಶಿವಕುಮಾರ್ಗೆ ಜಯ ಸಿಕ್ಕ ನಂತರ ಸಿಹಿ ಹಂಚಲು ಮಾಜಿ ಮೇಯರ್ ಪದ್ಮಾವತಿ ಡೈರಿ ಮಿಲ್ಕ್ ಚಾಕಲೇಟ್ ತಂದಿದ್ರು . ನ್ಯಾಯಲದಲ್ಲಿ ಡಿಕೆಶಿ ವಿರುದ್ದ ತೀರ್ಪು ಪ್ರಕಟಿಸುತ್ತಿದ್ದಂತೆ ಬೇಸರಗೊಂಡು, ಸಿಹಿ ಹಂಚದೆ ವಾಪಾಸ್ಸಾದರು.