ಬೆಂಗಳೂರು : ಎಲ್ಲಾ ಪರೀಕ್ಷೆಗಳನ್ನು ಆನ್‌ಲೈನ್ ಮೂಲಕ ನಡೆಸಿ ಸೆಮಿಸ್ಟರ್-ಎಂಡ್ ಪರೀಕ್ಷೆಗಳನ್ನು ಕಾಲೇಜಿನಲ್ಲಿಯೇ ನಡೆಸುವಂತೆ ಸೂಚಿಸಿರುವ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ (ವಿಟಿಯು) ನಿರ್ಧಾರವನ್ನು ವಿರೋಧಿಸಿ ಇದೇ ಸೋಮವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸುವುದಾಗಿ ಬೆಂಗಳೂರು ಆಮ್ ಆದ್ಮಿ ಯುವ ಘಟಕದ ಅಧ್ಯಕ್ಷ ಚಿನ್ಮಯ್ ನಾಡಿಗ್ ಹೇಳಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಜಿನಿಯರಿಂಗ್ ಕಾಲೇಜುಗಳು ಕೊರೊನಾ ನಿಯಮಗಳನ್ನು ಸಂಪೂರ್ಣ ಕಡೆಗಣಿಸುತ್ತಿವೆ ಮತ್ತು ವಿದ್ಯಾರ್ಥಿಗಳ ಸುರಕ್ಷತೆಗಾಗಿ ರೂಪಿಸಲಾದ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡುತ್ತಿವೆ. ಅಲ್ಲದೇ ಒಪ್ಪಿಗೆ ಪತ್ರಗಳಿಗೆ ಸಹಿ ಹಾಕುವಂತೆ ಪೋಷಕರಿಗೆ ಬೆದರಿಕೆ ಹಾಕುತ್ತಿದ್ದು, ಹಾಸ್ಟೆಲ್/ಸಾರಿಗೆ ಶುಲ್ಕವನ್ನು ಪಾವತಿಸಲು ಒತ್ತಾಯಿಸಲಾಗುತ್ತಿದೆ ಎಂದು ಆರೋಪಿಸಿದರು.
ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಕಾಲೇಜಿನಲ್ಲಿಯೇ ಬರೆಯಬೇಕು, ಇಲ್ಲದಿದ್ದರೆ ಮುಂಬರುವ ಸೆಮಿಸ್ಟರ್‌ಗಳಿಗೆ ಕ್ಯಾರಿ ಓವರ್ ಮಾಡಬೇಕು ಎಂದು ವಿಟಿಯು ಹೇಳಿರುವುದು ಅನ್ಯಾಯ. ಆನ್‌ಲೈನ್ ಪರೀಕ್ಷೆಗಳ ಆಯ್ಕೆಯನ್ನು ನೀಡಿರುವ ಈ ಸಂದರ್ಭದಲ್ಲಿ, ವಿಟಿಯು ತೆಗೆದುಕೊಂಡಿರುವ ನಿರ್ಧಾರವು ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಸಂದಿಗ್ಧತೆಗೆ ಸಿಲುಕಿಸಿದೆ ಎಂದರು.
ವರ್ಷವಿಡೀ ತರಗತಿಗಳು/ಇಂಟರ್ನಲ್ ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲಿ ನಡೆಸಿದಾಗ, ಸೆಮಿಸ್ಟರ್-ಎಂಡ್ ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲಿ ಏಕೆ ನಡೆಸಲಾಗುವುದಿಲ್ಲ? ಲಕ್ಷಾಂತರ ವಿದ್ಯಾರ್ಥಿಗಳು ಒಂದು ಊರು ಬಿಟ್ಟು ಮತ್ತೊಂದು ಊರಿಗೆ ಓದಲು ಬಂದಿರುತ್ತಾರೆ. ಹಾಸ್ಟೆಲ್‌ಗಳು ಇನ್ನೂ ತೆರೆಯದ ಕಾರಣ ಅನೇಕ ವಿದ್ಯಾರ್ಥಿಗಳು ದುಪ್ಪಟ್ಟು ಹಣ ಖರ್ಚು ಮಾಡಿಕೊಂಡು ಪರೀಕ್ಷೆ ಎದುರಿಸಬೇಕಾಗುತ್ತದೆ, ಇಂತಹ ಸಂಕಷ್ಟದ ಸಮಯದಲ್ಲಿ ಅಮಾನವೀಯ ನಿರ್ಧಾರ ಸಲ್ಲದು ಎಂದರು.