ಬೆಂಗಳೂರು: ನೂರಾರು ಜನರಿಂದ ಚೀಟಿ ಹಣ ಕಟ್ಟಿಸಿಕೊಂಡು ಕೋಟ್ಯಂತರ ರೂ. ವಂಚನೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸುವಂತೆ ಒತ್ತಾಯಿಸಿ ಫ್ರೀಡಂಪಾರ್ಕ್ ಮುಂಭಾಗ ಹಣ ಕಳೆದುಕೊಂಡವರು ಪ್ರತಿಭಟನೆ ನಡೆಸಿದರು.
ಗಿರಿನಗರ ಹಾಗೂ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಹಲವು ವರ್ಷಗಳಿಂದ ಜ್ಞಾನೇಶ್-ಲೀಲಾವತಿ ದಂಪತಿ ಚೀಟಿ ವ್ಯವಹಾರ ನಡೆಸುತ್ತಿದ್ದರು. ನೂರಾರು ಜನ ಇವರ ಬಳಿ ಚೀಟಿ ಕಟ್ಟಿದ್ದರು. ಚೀಟಿ ಮುಗಿದರೂ ಕೂಡ ಹಣ ನೀಡದೇ ಯಾಮಾರಿಸುತ್ತಿದ್ದ ಹಿನ್ನೆಲೆ ಜ್ಞಾನೇಶ್ ದಂಪತಿಯನ್ನು ಕಳೆದ ತಿಂಗಳು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಅದರೆ ಜ್ಞಾನೇಶ್ ಅಳಿಯ ರವಿಕುಮಾರ್, ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಠಾಣಾ ಬರಹಗಾರನಾಗಿ ಕೆಲಸ ಮಾಡುತ್ತಿದ್ದು, ಇನ್ನೂ ರವಿಕುಮಾರ್ನನ್ನು ಬಂಧಿಸಿಲ್ಲ. ಹೀಗಾಗಿ ರವಿಕುಮಾರ್ನನ್ನು ಕೂಡಲೇ ಬಂಧಿಸಿ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ವೇಳೆ ಹಣ ಕಳೆದುಕೊಂಡ ಮಹಿಳೆ ಮಂಜುಳಾ ಮಾತನಾಡಿ, ನಾವು ಇವರನ್ನೇ ನಂಬಿಕೊಂಡು ಇದ್ದೇವೆ. ಮಗಳ ಮದುವೆಗೆ ಹಣ ಇಟ್ಟಿದ್ದೆ. ಇದುವರೆಗೆ ಚೀಟಿ ಹೆಸರಿನಲ್ಲಿ 40 ಲಕ್ಷ ರೂ. ಹಣ ಕೊಟ್ಟಿದ್ದೆ. ಇದುವರೆಗೂ ಹಣ ವಾಪಸ್ ಕೊಟ್ಟಿಲ್ಲ. ಇತ್ತ ಮಗಳ ಮದುವೆ ಮಾಡುವುದಕ್ಕೆ ಹಣವಿಲ್ಲ. ನಾಲ್ಕು ವರ್ಷದಿಂದ ವ್ಯವಹಾರ ಮಾಡುತ್ತಿದ್ದೆ ಎಂದು ಬೇಸರ ವ್ಯಕ್ತಪಡಿಸಿದರು.
ಚಾಲಕ ನಾರಾಯಣ್ ಮಾತನಾಡಿ, ನಾನು 11 ವರ್ಷದ ಹಿಂದೆ ನಿವೃತ್ತಿ ಹೊಂದಿದ್ದೇನೆ. ನಿವೃತ್ತಿಯಾಗಿರುವ ಹಣ ಕೊಟ್ಟಿದ್ದೆ. ನನಗೆ ಹಣ ವಾಪಸ್ ಆಗಿಲ್ಲ ಎಂದು ಅಳಲು ತೋಡಿಕೊಂಡರು.
ವಕೀಲ ಮಂಜುನಾಥ್ ಮಾತನಾಡಿ, ಸಾಕಷ್ಟು ಜನ ಇವರಿಗೆ ಹಣ ಕೊಟ್ಟಿದ್ದಾರೆ. ನಾವು ದೂರು ಕೊಡಲು ಹೋದಾಗ ಮೊದಲು ನಿರ್ಲಕ್ಷ್ಯ ವಹಿಸಿದ್ದರು. ನೀಲಾವತಿ ಮಗಳು ಮೇಘನಾ ಕೂಡ ಇದರಲ್ಲಿ ಭಾಗಿಯಾಗಿದ್ದಾಳೆ. ಮೇಘನಾ ಪತಿ ರವಿಕುಮಾರ್ ಕೂಡ ಹಣ ತೆಗೆದುಕೊಂಡಿದ್ದಾರೆ. ಸುಮಾರು 450 ಜನರಿಂದ 18 ಕೋಟಿ ರೂಪಾಯಿ ವಸೂಲಿ ಮಾಡಿದ್ದಾರೆ. ಹೀಗಾಗಿ ಅವರಿಗೆ ನ್ಯಾಯ ಕೊಡಿಸುವ ವಿಚಾರವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ಇನ್ನು ಇಂದು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯಿದೆ. ಜಾಮೀನು ಸಿಕ್ಕರೆ ಜನರಿಗೆ ಬೆದರಿಕೆ ಹಾಕುವ ಸಂಭವವಿದೆ. ಹೀಗಾಗಿ ಕೂಡಲೇ ತನಿಖೆಯನ್ನು ಸಿಐಡಿಗೆ ವಹಿಸಲಿ ಎನ್ನುವುದು ನಮ್ಮ ಆಗ್ರಹ ಎಂದರು.