ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಆದೇಶಕ್ಕೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಗುರುವಾರಷ್ಟೇ ಸಹಿ ಮಾಡಿದ್ದಾರೆ. ಈ ಮೂಲಕ ಕರ್ನಾಟಕವು ದೇಶದಲ್ಲೇ ಮೊದಲನೆಯದಾಗಿ ನೂತನ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುತ್ತಿರುವ ರಾಜ್ಯವಾಗಿ ಹೊರಹೊಮ್ಮಿದೆ.
ಮತ್ತೊಂದೆಡೆ, ನೂತನ ಶಿಕ್ಷಣ ನೀತಿ ಜಾರಿಗೆ ಈಗಲೂ ವಿರೋಧ ವ್ಯಕ್ತವಾಗ್ತಿದೆ. ಆತುರಕ್ಕೆ ಬಿದ್ದು ಈ ಯೋಜನೆ ಜಾರಿ ಮಾಡಲು ರಾಜ್ಯ ಸರ್ಕಾರ ಹೊರಟಿದೆ ಅಂತ ವಿರೋಧ ಪಕ್ಷದ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ.
ಹೊಸ ಶಿಕ್ಷಣ ನೀತಿ ಜಾರಿಯಿಂದ ವಿದ್ಯಾರ್ಥಿಗಳ ಮೌಲ್ಯಯುತ ಶಿಕ್ಷಣಕ್ಕೆ ತೊಂದರೆಯಾಗಿ, ಮುಂದೆ ನಿರುದ್ಯೋಗ ಸಮಸ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂಬ ವಾದ ಹಲವರಿಗಿದೆ. ಯಾಕೆಂದರೆ, ಮೂರು ವರ್ಷ ಇರುವ ಪದವಿಯನ್ನು ನಾಲ್ಕು ವರ್ಷಕ್ಕೆ ಏರಿಸಿದ್ದು, ಇದರಲ್ಲಿ ಒಂದು ವರ್ಷ ಕಲಿತರೂ ಸರ್ಟಿಫಿಕೇಟ್ ನೀಡಲಾಗುತ್ತದೆ. ಇದರಿಂದ ಮೌಲ್ಯಯುತ ಶಿಕ್ಷಣಕ್ಕೆ ಹೊಡೆತ ಬೀಳುತ್ತದೆ. ಹೀಗಾಗಿ ನೀತಿಯು ಅಸಮರ್ಪಕವಾಗಿದ್ದು ಕೈ ಬಿಡಬೇಕೆಂಬ ಚರ್ಚೆ ಇದೆ.
ಈ ಕುರಿತು ಮಾತನಾಡಿರುವ ಪ್ರಾಧ್ಯಾಪಕರು ಮತ್ತು ನೂತನ ಶಿಕ್ಷಣ ನೀತಿಯ ಪಠ್ಯಕ್ರಮ ಸಮಿತಿಯ ಸದಸ್ಯರೂ ಆಗಿರುವ ಪ್ರೊ.ಡಾ.ಅಶೋಕ್ ಹಂಜಗಿ, ಹೊಸ ಶಿಕ್ಷಣ ನೀತಿಯು ವಿದ್ಯಾರ್ಥಿ ಕೇಂದ್ರಿತವಾಗಿದ್ದು, ನಿರುದ್ಯೋಗ ಸಮಸ್ಯೆ ಉಲ್ಬಣವಾಗುವುದಿಲ್ಲ. ಈ ಸಮಸ್ಯೆ ಹೋಗಲಾಡಿಸಲು ಸಾಧ್ಯವಿಲ್ಲ. ಆದರೆ ಒಬ್ಬ ವಿದ್ಯಾರ್ಥಿ ಈ ನೀತಿಯಡಿ ತನಗೆ ಇಷ್ಟವಿರುವ ಹಾಗೂ ಬೇಕಿರುವ ಕೌಶಲ್ಯಾಧಾರಿತ, ತಾಂತ್ರಿಕ ಕೋರ್ಸ್ಗಳನ್ನ ಆಯ್ಕೆ ಮಾಡಿಕೊಳ್ಳಬಹುದು. ಈ ಮೂಲಕ ಉದ್ಯಮಶೀಲತೆಯ ಗುಣಗಳನ್ನು ಬೆಳೆಸಿಕೊಳ್ಳಲು ಸಹಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿದ್ಯಾರ್ಥಿಗಳು ಕೌಶಲ್ಯಾಧಾರಿತ ಕೋರ್ಸ್ ಕಲಿಯುವುದರಿಂದ ಸಾಕಷ್ಟು ಉದ್ಯೋಗದ ಅವಕಾಶವೂ ಇದ್ದು, ಸಣ್ಣ ಪ್ರಮಾಣದ ಉದ್ಯಮವನ್ನೂ ಅವರೇ ಸೃಷ್ಟಿ ಮಾಡಬಹುದು. ಬೇರೆಯವರಿಗೂ ಉದ್ಯೋಗ ಕೊಡಬಹುದು, ಈ ರೀತಿಯ ಹಾದಿಯನ್ನ ಹೊಸ ಶಿಕ್ಷಣ ನೀತಿ ಮಾಡಿಕೊಡುತ್ತದೆ ಎಂದು ವಿವರಣೆ ನೀಡಿದ್ದಾರೆ.
'ಉತ್ತಮ ಶಿಕ್ಷಣ ಪಡೆಯಬಹುದು'
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳು ಹೆಚ್ಚು ಪ್ರಬಲರಾಗಿ ಗುಣಮಟ್ಟದ ಶಿಕ್ಷಣ ಪಡೆಯಲು ಸಹಕಾರಿಯಾಗಲಿದೆ. ಕೋಡಿಂಗ್ ಕ್ಲಾಸ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಇನ್ನೋವೆಟಿವ್ ಕೋರ್ಸ್, ಡೇಟಾ ಅನಾಲಿಸಿಸ್ನಂತಹ ಶಿಕ್ಷಣವನ್ನ ಪದವಿ ಓದುವಾಗಲೇ ಕಲಿಯಬಹುದು. ಶಿಕ್ಷಣ ನೀತಿಯು ಅಡಿಪಾಯವಾಗಿ ನಿಲ್ಲವುದರ ಜೊತೆಗೆ ಸುಶಿಕ್ಷಿತರನ್ನಾಗಿ ಮಾಡಲಿದೆ ಎಂದು ಪ್ರೊ.ಡಾ.ಅಶೋಕ್ ಹಂಜಗಿ ಹೇಳುತ್ತಾರೆ.
ಇದನ್ನೂ ಓದಿ: ಅಂಗಾಂಗ ದಾನಕ್ಕೆ ಸಹಿ ಹಾಕುವೆ, ಜೀವಗಳ ಉಳಿಸುವ ಕಾರ್ಯಕ್ಕೆ ಮುಂದಾಗೋಣ: ಸಿಎಂ ಬೊಮ್ಮಾಯಿ