ಬೆಂಗಳೂರು : ರಾಜ್ಯದ ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸರ್ಕಾರ ಸೂಕ್ತ ಸೌಕರ್ಯಗಳನ್ನು ಕಲ್ಪಿಸದ ಪರಿಣಾಮ ಶಾಲೆಗಳು, ಪೊಲೀಸ್ ಕಚೇರಿಗಳಲ್ಲಿ ಸೇವೆ ಸಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೇಂದ್ರಗಳ ಸ್ಥಿತಿ ಶೋಚನೀಯವಾಗಿದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಹೈಕೋರ್ಟ್‌ಗೆ ವರದಿ ನೀಡಿದೆ.
ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಆಸ್ಪತ್ರೆ ಆರಂಭಿಸಲು ಸರ್ಕಾರಕ್ಕೆ ನಿರ್ದೇಶನ ಕೋರಿ ಬೀದರ್‌ನ ಗುರುನಾಥ ವಡ್ಡೆ ಎಂಬುವರು ಪಿಐಎಲ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಸರ್ಕಾರಿ ಆಸ್ಪತ್ರೆಗಳಿಗೆ ಆಯಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರು ಭೇಟಿ ನೀಡಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆ ಕೆಎಸ್ಎಲ್ಎಸ್ಎ ವರದಿ ಸಲ್ಲಿಸಿದೆ.
ವರದಿಯಲ್ಲಿ ಕೆಎಸ್ಎಲ್ಎಸ್ಎ ಸದಸ್ಯರು ರಾಜ್ಯದಲ್ಲಿ ಆಯ್ದ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 1 ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ ಬಹುತೇಕ ಕೇಂದ್ರಗಳ ಸ್ಥಿತಿ ಶೋಚನೀಯವಾಗಿದೆ. ನಿಯಮದಂತೆ ಯಾವ ಪ್ರಾಥಮಿಕ ಆರೋಗ್ಯ ಕೇಂದ್ರವೂ 4 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿಲ್ಲ. 75 ಕೇಂದ್ರಗಳಲ್ಲಿ ತುರ್ತು ಆ್ಯಂಬುಲೆನ್ಸ್ ಸೇವೆ ಹಾಗೂ ಹೆರಿಗೆ ಕೊಠಡಿ ಇಲ್ಲ ಎಂದು ಹೇಳಿದೆ.
ಮಂಡ್ಯದ ಶಂಕರಪುರ ಗ್ರಾಮದ ಶಾಲೆಯಲ್ಲಿ ಆರೋಗ್ಯ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದರೆ, ಧಾರವಾಡದಲ್ಲಿ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದೆ. ಇನ್ನು ಮೈಸೂರಿನ ದೂರ ಗ್ರಾಮ, ತುಮಕೂರಿನ ಬೆಳ್ಳಾವಿ, ಚಿಕ್ಕಮಗಳೂರಿನ ಹಿರೇಮಗಳೂರಿನಲ್ಲಿರುವ ಪಿಎಚ್‌ಸಿಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಹಾಗೆಯೇ, ಯಾವ ಪಿಎಚ್‌ಸಿಯಲ್ಲೂ ಅಗತ್ಯ ಪ್ರಮಾಣದ ಸಿಬ್ಬಂದಿ ಇಲ್ಲ. 67 ಕೇಂದ್ರಗಳಲ್ಲಿ ವೈದ್ಯರು ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿಗೆ ವಸತಿ ವ್ಯವಸ್ಥೆ ಇಲ್ಲ. ಇದೇ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಶಿಫಾರಸು ಮಾಡಿದೆ.