ಬೆಂಗಳೂರು : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 2019-20ನೇ ಸಾಲಿನ ವಾರ್ಷಿಕ ವರದಿ ಬಿಡುಗಡೆ ಮಾಡಿದ್ದು, ರಾಜ್ಯದ ತ್ಯಾಜ್ಯ ನಿರ್ವಹಣೆ ಬಗ್ಗೆ ವರದಿ ನೀಡಿದೆ.
ರಾಜ್ಯದಲ್ಲಿ ಉತ್ಪತ್ತಿಯಾಗುತ್ತಿರುವ 11,958 ಟಿಪಿಡಿ ತ್ಯಾಜ್ಯದ ಪೈಕಿ ಕೇವಲ 10,011 ಟಿಪಿಡಿ ಕಸವನ್ನು ಸಂಗ್ರಹಿಸಲಾಗುತ್ತಿದೆ. 4,515 ಟಿಪಿಡಿ ಮಾತ್ರ ಸಂಸ್ಕರಣೆಗೊಳ್ಳುತ್ತಿದೆ. ಬಿಬಿಎಂಪಿಯೂ ಇದರಲ್ಲಿ ಹಿಂದೆ ಉಳಿದಿದ್ದು, ವಿವರ ಇಲ್ಲಿದೆ.
ಒಟ್ಟು ರಾಜ್ಯದಲ್ಲಿ 35,869 ಆರೋಗ್ಯ ಕೇಂದ್ರಗಳು ಹಾಗೂ ಆಸ್ಪತ್ರೆಗಳಿದ್ದು, ಇವುಗಳಿಂದ 61.22 ಟಿಪಿಡಿ ಬಯೋ ಮೆಡಿಕಲ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. 30 ಬಯೋಮೆಡಿಕಲ್ ವೇಸ್ಟ್ ಸಂಸ್ಕರಣಾ ಕೇಂದ್ರಗಳಿದ್ದು, ಇದರಲ್ಲಿ 26 ಘಟಕಗಳ ಕಾರ್ಯನಿರ್ವಹಿಸುತ್ತಿವೆ. ಘನತ್ಯಾಜ್ಯ ನಿರ್ವಹಣೆ, ಸಂಗ್ರಹ, ಸಾಗಾಣಿಕೆ, ಸಂಸ್ಕರಣೆ, ಅಂತರ್ಜಲದ ನೀರು, ಗಾಳಿಯ ಗುಣಮಟ್ಟವನ್ನು ಕೆಎಸ್‌ಪಿಸಿಬಿ ಪರಿಶೀಲನೆ ನಡೆಸುತ್ತದೆ.
ರಾಜ್ಯದಲ್ಲಿ ಉತ್ಪತ್ತಿಯಾಗುವ ಒಟ್ಟು ಘನತ್ಯಾಜ್ಯದ ಪ್ರಮಾಣ :
ಒಟ್ಟು ಘನತ್ಯಾಜ್ಯದ ಪ್ರಮಾಣ | ಘನತ್ಯಾಜ್ಯ ಸಂಗ್ರಹ | ಸಂಸ್ಕರಣೆ |
11,958 | 10,011 | 4,515 |
ಬಿಬಿಎಂಪಿ ಹೊರತುಪಡಿಸಿ ರಾಜ್ಯದಲ್ಲಿ ಒಟ್ಟು 279 ಸ್ಥಳೀಯ ಸಂಸ್ಥೆಗಳಿವೆ. 215 ಸ್ಥಳೀಯ ಸಂಸ್ಥೆಗಳು ಭೂಭರ್ತಿ ವಿಧಾನವನ್ನು ಅಳವಡಿಸಿಕೊಂಡಿದೆ. ಉಳಿದ ಹನ್ನೊಂದು ಕಡೆ ಘನತ್ಯಾಜ್ಯ ನಿರ್ವಹಣಾ ನಿಯಮದಂತೆ ಸ್ಯಾನಿಟರಿ ಲ್ಯಾಂಡ್ ಫಿಲ್ ಯೋಜನೆ ಅಳವಡಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯ ಘನತ್ಯಾಜ್ಯ ನಿರ್ವಹಣೆ :
ಪ್ರದೇಶ | ಕಸದ ಉತ್ಪತ್ತಿ ಮತ್ತು ಸಂಗ್ರಹ | ಟಿಪಿಡಿ |
ವಸತಿ, ಸಣ್ಣ ವಾಣಿಜ್ಯ, ರಸ್ತೆ | 4,200 | 2,940 |
ಸಗಟು ಕಸ ಉತ್ಪಾದಕರು | 1,500 | 1,500 |
ಒಟ್ಟು | 5,700 | 4,440 |
ನಗರದಲ್ಲಿ ಒಟ್ಟು 9 ಕಸ ನಿರ್ವಹಣಾ ಘಟಕಗಳಿವೆ. ಜೊತೆಗೆ ಮೂಲದಲ್ಲೇ ಕಸ ವಿಂಗಡಿಸಲು ಉತ್ತೇಜಿಸಿ ನಗರದಲ್ಲಿ 188 ಒಣ ಕಸ ಸಂಗ್ರಹ ಕೇಂದ್ರಗಳ ನಿರ್ಮಾಣ ಮಾಡಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಬಿಬಿಎಂಪಿಗೆ 7 ಕಸ ನಿರ್ವಹಣಾ ಘಟಕ, 10 ಮಿಶ್ರತ್ಯಾಜ್ಯ ಸಂಸ್ಕರಣಾ ಘಟಕ, 7 ಭೂಭರ್ತಿ ಕೇಂದ್ರ, 15 ವಿಕೇಂದ್ರಿತ ಬಯೋ ಮೆಥನೈಸೇಷನ್ ಘಟಕ ಸ್ಥಾಪನೆಗೆ ಅನುಮತಿ ನೀಡಿದೆ. ಅಲ್ಲದೆ, ರಾಜ್ಯದಲ್ಲಿ ಒಟ್ಟು 127 ಈ ವೇಸ್ಟ್ ಸಂಗ್ರಹ ಕೇಂದ್ರಗಳಿವೆ.
ಮಂಡಳಿ ಈ ವರದಿಯನ್ನು ಸರ್ಕಾರ ಹಾಗೂ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಗೆ ನೀಡಿ, ತ್ಯಾಜ್ಯ ನಿರ್ವಹಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಯೋಜನೆ ಕೈಗೊಳ್ಳುವಂತೆ ಕಾರ್ಯಯೋಜನೆ ಹಾಕಿಕೊಳ್ಳುವಂತೆ ನಿರ್ದೇಶಿಸಲಿದೆ.