ಸದನದಲ್ಲಿ ಎಸ್ಪಿಬಿ ನೆನಪು: ವಿಧಾನಸಭೆಯಲ್ಲಿ ಸಂತಾಪ ಸೂಚಿಸಿದ ರಾಜಕೀಯ ನಾಯಕರು - ಎಸ್ಪಿಬಿ ರಿಪ್
ಭಾರತೀಯ ಸಂಗೀತ ಕ್ಷೇತ್ರದ ಮಹಾನ್ ದಿಗ್ಗಜರಲ್ಲಿ ಒಬ್ಬರಾಗಿದ್ದ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ನಿಧನರಾದ ಹಿನ್ನೆಲೆ ಸಮಸ್ಯೆಗಳ ಸರಮಾಲೆ ಕುರಿತು ಚರ್ಚೆ ನಡೆಸುತ್ತಿದ್ದ ವಿಧಾನಸಭೆಯಲ್ಲಿ ಮೌನ ಕವಿದಿತ್ತು. ರಾಜಕೀಯ ನಾಯಕರು ಸಂಗೀತ ಮಾಂತ್ರಿಕನ ನೆನಪನ್ನು ಸದನದಲ್ಲಿ ಹಂಚಿಕೊಂಡು ಸಂತಾಪ ಸೂಚಿಸಿದರು.
ಬೆಂಗಳೂರು: ದೇಶದ ಪ್ರತಿಭಾನ್ವಿತ ಗಾಯಕ ಡಾ. ಎಸ್.ಪಿ.ಬಾಲಸುಬ್ರಮಣ್ಯಂ ನಿಧನಕ್ಕೆ ವಿಧಾನಸಭೆಯಲ್ಲಿ ಇಂದು ಸಂತಾಪ ಸೂಚಿಸಲಾಯಿತು.
ವಿಧಾನಸಭೆಯಲ್ಲಿ ಸಂತಾಪ ಸೂಚನೆ ವೇಳೆ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಎಸ್.ಪಿ.ಬಾಲಸುಬ್ರಮಣ್ಯಂ 40 ಸಾವಿರಕ್ಕೂ ಹೆಚ್ಚು ಗೀತೆಗಳನ್ನ ಹಾಡಿದವರು. ನಟರಾಗಿ, ನಿರ್ಮಾಪಕರಾಗಿ ಸಾಧನೆ ಮಾಡಿದವರು. 21 ಹಾಡುಗಳನ್ನು ಏಕಕಾಲಕ್ಕೆ ಹಾಡಿ ದಾಖಲೆ ಬರೆದವರು. ಹಲವು ರಾಷ್ಟ್ರ ಪ್ರಶಸ್ತಿಗಳಿಗೆ ಭಾಜನರಾದವರು. 25 ಬಾರಿ ಆಂಧ್ರದ ನಂದಿ ಪ್ರಶಸ್ತಿ ಪಡೆದವರು. ಅವರ ಅಕಾಲಿಕ ನಿಧನದಿಂದ ನನ್ನ ಮನಸ್ಸಿಗೆ ಅತೀವ ನೋವುಂಟಾಗಿದೆ ಎಂದು ಕಂಬನಿ ಮಿಡಿದರು. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲೆಂದು ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿಗೆ ಭಗವಂತ ದಯಪಾಲಿಸಲೆಂದು ಪ್ರಾರ್ಥಿಸಿದರು.
ಅವರ ಅಗಲಿಕೆ ನೋವು ತಂದಿದೆ:
ಇದೇ ವೇಳೆ ಸಂತಾಪ ಸೂಚಿಸಿದ ಕಾನೂನು ಸಚಿವ ಮಾಧುಸ್ವಾಮಿ, ಸಂತಾಪ ಸೂಚನೆಗೆ ಸದನ ಕರೆದಂತಾಗಿದೆ. ಎಸ್ಪಿಬಿ ನಮ್ಮ ರಾಜ್ಯದ ಮೇಲೆ ಅಭಿಮಾನವಿಟ್ಟಿದ್ದರು. ಕನ್ನಡ ನಾಡಿನಲ್ಲಿ ಹುಟ್ಟಬೇಕೆಂದು ಹೇಳಿದ್ದರು ಎಂದು ಸ್ಮರಿಸಿದರು.
ಚೆನ್ನೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಮಗ ಹುಷಾರಾಗ್ತಿದ್ದಾರೆಂದು ಹೇಳಿದ್ದರು. ಆಗ ನಮಗೂ ಸಂತೋಷವಾಗಿತ್ತು. ಆದರೆ ಈಗ ಅವರ ಅಗಲಿಕೆ ನಮಗೆ ನೋವು ತಂದಿದೆ. ಕನ್ನಡ ವಿಜೃಂಬಿಸಲು ಕಾರಣರಾಗಿದ್ದರು. ಮಣ್ಣಿನ ಮಗನಾಗದಿದ್ದರೂ ಭಾಷೆ, ಸಾಹಿತ್ಯಕ್ಕೆ ಸೇವೆ ಸಲ್ಲಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ತಡೆಯುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಸಂಗೀತ ಕ್ಷೇತ್ರಕ್ಕೆ ಅಪಾರ ನಷ್ಟ
ಅವರ ನಿಧನದಿಂದ ಸಂಗೀತ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಂಬನಿ ಮಿಡಿದರು. ಬಾಲಸುಬ್ರಮಣ್ಯಂ ಆಂಧ್ರದ ನೆಲ್ಲೂರು ಜಿಲ್ಲೆಯವರು. ಬಹುಮುಖಪ್ರತಿಭೆಯ ಗಾಯಕರಾಗಿದ್ದರು. 10 ಭಾಷೆಗಳಲ್ಲಿ 40 ಸಾವಿರ ಹಾಡು ಹಾಡಿದ್ದಾರೆ. ಕನ್ನಡದಲ್ಲಿಯೇ ಹೆಚ್ಚು ಹಾಡು ಹಾಡಿದ್ದಾರೆ. ಕನ್ನಡ ಭಾಷೆಯ ಚಿತ್ರಗಳಿಗೆ ಹಿನ್ನೆಲೆ ಗಾಯನ ಒದಗಿಸಿದರು. ರಾಜ್, ವಿಷ್ಣು, ಅಂಬಿ ಎಲ್ಲರ ಚಿತ್ರಕ್ಕೆ ಹಾಡಿದ್ದರು. ಇತ್ತೀಚಿನ ಶಿವರಾಜ್ ಕುಮಾರ್ ಚಿತ್ರಕ್ಕೂ ಹಾಡಿದವರು. ಕನ್ನಡ ಭಾಷೆಯ ಬಗ್ಗೆ ಅಪಾರ ಅಭಿಮಾನವಿತ್ತು. ಮುಂದೆ ಕರುನಾಡಿನಲ್ಲೇ ಹುಟ್ಟಬೇಕೆಂದಿದ್ದರು. ರಾಜ್ ಕುಮಾರ್, ಎಸ್ಪಿಬಿಯವರನ್ನ ಗುಣಗಾನ ಮಾಡ್ತಿದ್ರು. ಆದರೆ ದುರ್ದೈವ ಇವತ್ತು ಸಾವನ್ನಪ್ಪಿದ್ದಾರೆ ಎಂದು ಸಂತಾಪ ಸೂಚಿಸಿದರು.
ಕುಮಾರ್ ಬಂಗಾರಪ್ಪ ಭಾವುಕ
ಬಾಲಸುಬ್ರಮಣ್ಯಂ ಸರ್ ಅವರನ್ನು 30 ವರ್ಷಗಳಿಂದ ನೋಡಿದ್ದೇನೆ. ನಾನು ಚಿತ್ರರಂಗಕ್ಕೆ ಬಂದ ನಂತರ ಸಂಬಂಧ ಹೆಚ್ಚಾಯ್ತು. ಎದೆತುಂಬಿ ಹಾಡುವೆನು ಕಾರ್ಯಕ್ರಮದ ಮೂಲಕ ಮನೆ ಮಾತಾದರು. ಇಡೀ ಕರ್ನಾಟಕದಲ್ಲಿ ಮನೆ ಮಾತಾದವರು ಎಂದು ಭಾವುಕರಾಗಿ ನುಡಿದರು. ಮಕ್ಕಳ ಜೊತೆ ಮಗುವಿನಂತೆಯೇ ವರ್ತಿಸುತ್ತಿದ್ದರು. ಚಿತ್ರರಂಗದವರ ಜೊತೆ ಬಹಳ ಅಭಿಮಾನ ಇಟ್ಟುಕೊಂಡಿದ್ದರು. ಮೌರ್ಯ ಹೊಟೇಲ್ ಅವರ ಅಚ್ಚುಮೆಚ್ಚಿನ ತಾಣ. ಪರಸಂಗದ ಗೆಂಡೆತಿಮ್ಮ ಚಿತ್ರದ ಹಾಡು ಮರೆಯಲು ಸಾಧ್ಯವಿಲ್ಲ. ತೇರಾ ಏರಿ ಅಂಬರದ ಮೇಲೆ ಹಾಡು ಮರೆಯೋಕೆ ಆಗಲ್ಲ. ಪವಡಿಸೋ ಪರಮಾತ್ಮ ಹಾಡು ಎಲ್ಲರಲ್ಲೂ ಭಕ್ತಿಭಾವ ಮೂಡಿಸುತ್ತಿತ್ತು. ಅವರ ಅಗಲಿಕೆ ನಮಗೆ ತುಂಬಾ ನೋವಾಗಿದೆ. ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ ಎಂದು ಕಂಬನಿ ಮಿಡಿದರು.