ಬೆಂಗಳೂರು : ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಮೇಲ್ ಪ್ರಕರಣ ಕುರಿತು ತನಿಖೆಯನ್ನು ತೀವ್ರಗೊಳಿಸಿದ್ದೇವೆ. ಇ-ಮೇಲ್ ಪೋರ್ಟಲ್ಗಳು ಬೇರೆ ದೇಶದಲ್ಲಿ ಇರುವ ಕಾರಣ ಮಾಹಿತಿ ಪಡೆಯಲು ತಡವಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ. ಹಲವು ತನಿಖಾ ಸಂಸ್ಥೆಗಳು ತನಿಖೆಗೆ ಸಹಕಾರ ನೀಡುತ್ತಿವೆ. ಬೇರೆ ಬೇರೆ ಇ-ಮೇಲ್ ಐಡಿಯಿಂದ ಮೇಲ್ಗಳು ಬಂದಿದೆ. ತನಿಖೆ ಪೂರ್ಣಗೊಂಡ ಬಳಿಕೆ ಮಾಹಿತಿ ಹಂಚಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಎಲ್ಲ ಪೊಲೀಸ್ ವಿಭಾಗಗಳಲ್ಲಿನ ಶಾಲೆಗಳಿಗೆ ಕರೆ ಮಾಡಿ ಮಾಹಿತಿ ಪಡೆಯುತ್ತಿದ್ದೇವೆ. ದುಷ್ಕರ್ಮಿಗಳು ಇ-ಮೇಲ್ ಮಾಡಿ ಹಲವು ಕಡೆ ಬಾಂಬ್ ಬೆದರಿಕೆ ಹಾಕಿದ್ದಾರೆ. ಬಾಂಬ್ ಬೆದರಿಕೆಯ ಕುರಿತು ತನಿಖೆ ಚುರುಕುಗೊಳಿಸಲಾಗಿದೆ ಎಂದು ಬಾಂಬ್ ಪ್ರಹಸನದ ಕುರಿತು ಕಮಲ್ ಪಂತ್ ಮಾಹಿತಿ ನೀಡಿದ್ದಾರೆ.
ಹುಸಿ ಬಾಂಬ್ ಬೆದರಿಕೆ ಪ್ರಹಸನ : ಇಡೀ ಬೆಂಗಳೂರು ನಿನ್ನೆ ಬಾಂಬ್ ಬೆದರಿಕೆಯ ಇ-ಮೇಲ್ಗೆ ಬೆಚ್ಚಿಬಿದ್ದಿತ್ತು. 30ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಶಾಲೆಗಳಿಗೆ ಬೆದರಿಕೆ ಕರೆ ಬಂದಿದ್ದರೂ ಆಡಳಿತ ಮಂಡಳಿಯವರು ಮಾಹಿತಿ ಮುಚ್ಚಿಟ್ಟಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು.