ಬೆಂಗಳೂರು: ಕಳೆದ ಒಂದು ವಾರದ ಹಿಂದಷ್ಟೇ ಕರ್ನಾಟಕ ಬ್ಯಾಂಕ್ ಎಟಿಎಂ ಸೆಕ್ಯೂರಿಟಿ ಗಾರ್ಡ್ನನ್ನು ಕೊಲೆ ಮಾಡಿದ್ದ ಆರೋಪಿ ಮೇಲೆ ಬೆಳ್ಳಂಬೆಳ್ಳಗೆ ಕುಮಾರಸ್ವಾಮಿ ಲೇಔಟ್ ಪೊಲೀಸರು ಎರಡು ಕಾಲುಗಳಿಗೂ ಫೈರಿಂಗ್ ಮಾಡಿ ಬಂಧಿಸಿದ್ದಾರೆ.
ಮಾರ್ಚ್ 24 ರಂದು ಬ್ಯಾಂಕ್ ಸಿಬ್ಬಂದಿ ಲಿಂಗಪ್ಪ ಎಂಬವರನ್ನು ಹಣಕ್ಕಾಗಿ ಕೊಲೆಮಾಡಿದ ಆರೋಪಿ ರಾಜೇಂದ್ರ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ಇಂದು ಮುಂಜಾನೆ ಕೋಣನಕುಂಟೆಯ ನಾರಾಯಣಪುರ ಬಳಿ ಆರೋಪಿ ಇರುವುದನ್ನು ಖಚಿತಪಡಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳುವ ಭರದಲ್ಲಿ ಪೊಲೀಸರ ಮೇಲೆ ಕಲ್ಲು ಎಸೆದು ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಗಾಳಿಯಲ್ಲಿ ಒಂದು ಬಾರಿ ಗುಂಡು ಹಾರಿಸಿ, ಬಳಿಕ ಎರಡು ಕಾಲುಗಳಿಗೂ ಗುಂಡು ಹಾರಿಸಿ ಬಂಧಿಸಿದ್ದಾರೆ, ಸದ್ಯ ಈತನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಸೇರಿಸಲಾಗಿದೆ.
ಆರೋಪಿ ಎರಡು ಕೊಲೆ ಕೇಸ್ನಲ್ಲಿ ಭಾಗಿಯಾಗಿದ್ದಾನೆ. ನಾಲ್ಕು ದಿನಗಳ ಹಿಂದೆ ಜೆ.ಸಿ.ನಗರ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಕಲ್ಲು ಎಸೆದು ಹಲ್ಲೆ ನಡೆಸಿದ್ದಾನೆ. ಅಲ್ಲದೆ ಕಾವೇರಿ ಗಲಾಟೆಯಲ್ಲಿ ಕಲ್ಲೆಸೆದು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಧಕ್ಕೆ ತಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.