ಬೆಂಗಳೂರು: ಬಯಸದೇ ಬಂದ ಭಾಗ್ಯದ ಮುಖ್ಯಮಂತ್ರಿಗಳೇ ನಮ್ಮ ಬೇಡಿಕೆ ಈಡೇರಿಸಿ ಎನ್ನುವ ಬ್ಯಾನರ್ ಹಿಡಿದು ರಾಜ್ಯದ ವಿವಿಧ ಭಾಗದಿಂದ ಆಗಮಿಸಿದ್ದ ಪೈಲ್ವಾನರು ಮಾಸಾಶನ ಹೆಚ್ಚಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ಆರ್.ಟಿ ನಗರದಲ್ಲಿರುವ ಸಿಎಂ ನಿವಾಸಕ್ಕೆ ಆಗಮಿಸಿದ ಪೈಲ್ವಾನರು ಬೊಮ್ಮಾಯಿ ಭೇಟಿಗಾಗಿ ಭಿತ್ತಿಪತ್ರಗಳನ್ನು ಹಿಡಿದು ಅವರ ನಿವಾಸದ ಎದುರು ಕಾದು ಕುಳಿತರು. ಉಪರಾಷ್ಟ್ರಪತಿಗಳನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ನಿವಾಸದ ಬಳಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಕುಂದುಕೊರತೆಗಳನ್ನು ಆಲಿಸಿದರು. ಈ ವೇಳೆ ಪೈಲ್ವಾನರ ಅಹವಾಲನ್ನೂ ಆಲಿಸಿದರು.
ಮಾಸಾಶನ ಹೆಚ್ಚಿಸುವ ಬಗ್ಗೆ ಹಿಂದಿನ ಸಿಎಂ ಯಡಿಯೂರಪ್ಪ ಮಾತು ಕೊಟ್ಟಿದ್ದರು. ಆದರೆ ಈವರೆಗೆ ಹಚ್ಚಿಗೆ ಮಾಡಿಲ್ಲ. ಅಧಿಕಾರಿಗಳನ್ನು ಕೇಳಿದರೆ ಕೊರೊನಾ ನೆಪ ಹೇಳುತ್ತಿದ್ದಾರೆ. ಹೀಗಾಗಿ ನಮ್ಮ ಮಾಸಾಶನ ಹೆಚ್ಚಳಕ್ಕೆ ಕ್ರಮ ಕೈಗೊಂಡು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು. ಮನವಿ ಆಲಿಸಿದ ಸಿಎಂ ಪರಿಶೀಲನೆ ಮಾಡುವ ಭರವಸೆ ನೀಡಿದರು.
ಈ ವೇಳೆ ಮಾತನಾಡಿದ ಪೈಲ್ವಾನರು, ಬಸವರಾಜ ಬೊಮ್ಮಾಯಿ ಅವರು ಬಯಸದೇ ಬಂದ ಭಾಗ್ಯದಂತೆ ಸಿಎಂ ಆಗಿದ್ದಾರೆ. ಅದಕ್ಕಾಗಿ ಇವರು ನಮ್ಮ ಬೇಡಿಕೆ ಈಡೇರಿಸುತ್ತಾರೆ ಎಂದು ನಂಬಿದ್ದೇವೆ ಎಂದರು.