ಬೆಂಗಳೂರು: ನಗರದಲ್ಲಿ ಹಸಿರೀಕರಣ ಹೆಚ್ಚು ಮಾಡುವ ಉದ್ದೇಶದಿಂದ ಬಿಡಿಎ ಸುಪರ್ದಿಯಲ್ಲಿರುವ ಪಾರ್ಕ್ಗಳನ್ನು ಬಿಬಿಎಂಪಿಗೆ ಹಸ್ತಾಂತರ ಮಾಡುವ ಬಗ್ಗೆ ಬಿಡಿಎ ಅಧ್ಯಕ್ಷ ಎಸ್.ಆರ್ ವಿಶ್ವನಾಥ್ ಸಭೆ ನಡೆಸಿದ್ದಾರೆ.
ಬಿಡಿಎ ತೋಟಗಾರಿಕೆ ಮತ್ತು ಅರಣ್ಯ ವಿಭಾಗದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಎಸ್.ಆರ್.ವಿಶ್ವನಾಥ್, ಇನ್ಮುಂದೆ ಬಿಡಿಎಗೆ ಸೇರಿದ ಬಡಾವಣೆಗಳಲ್ಲಿ ಇದುವರೆಗೂ ಪ್ರಾಧಿಕಾರ ಅಭಿವೃದ್ಧಿಪಡಿಸಿರುವ ಉದ್ಯಾನಗಳನ್ನು ಹಂತಹಂತವಾಗಿ ಬಿಬಿಎಂಪಿಗೆ ಹಸ್ತಾಂತರ ಮಾಡಲು ನಿರ್ಧರಿಸಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮತಿ ಸೂಚಿಸಿದ್ದಾರೆ ಎಂದರು.
ಈಗಾಗಲೇ ಅಭಿವೃದ್ಧಿಪಡಿಸಿರುವ ಕೆಲವು ಪಾರ್ಕ್ಗಳನ್ನು ಬಿಡಿಎ ತನ್ನ ಸುಪರ್ದಿಯಲ್ಲಿಟ್ಟುಕೊಂಡು ನಿರ್ವಹಣೆ ಮಾಡಲಿದೆ. ಆದರೆ, ಬಹುತೇಕ ಪಾರ್ಕ್ಗಳನ್ನು ಬಿಬಿಎಂಪಿಗೆ ಹಸ್ತಾಂತರ ಮಾಡಲಾಗುತ್ತದೆ. ಇವುಗಳಲ್ಲಿ ಬಿಡಿಎ ಅಭಿವೃದ್ಧಿಪಡಿಸಿರುವ ಪಾರ್ಕ್ಗಳು ಮತ್ತು ಅಭಿವೃದ್ಧಿ ಮಾಡಬೇಕಾಗಿರುವ ಪಾರ್ಕ್ಗಳ ನಿರ್ಮಾಣಕ್ಕೆ ಮೀಸಲಾಗಿರುವ ಜಾಗಗಳನ್ನು ಬಿಬಿಎಂಪಿಗೆ ಹಸ್ತಾಂತರಿಸಲಾಗುತ್ತದೆ ಎಂದರು.
ಟ್ರೀ ಪಾರ್ಕ್ ನಿರ್ಮಾಣಕ್ಕೆ ಒತ್ತು:
ಇನ್ಮುಂದೆ ಬಿಡಿಎ ಮತ್ತು ಬಿಡಿಎ ಅನುಮೋದಿತ ಪಾರ್ಕ್ಗಳನ್ನು ಟ್ರೀ ಪಾರ್ಕ್ಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಇದರಲ್ಲಿ ದೀರ್ಘಕಾಲಿಕವಾಗಿ ಇರುವ ಮರಗಳನ್ನು ಬೆಳೆಸುವುದು, ವಾಯುವಿಹಾರಿಗಳಿಗೆ ಕುಳಿತುಕೊಳ್ಳಲು ಬೆಂಚುಗಳು, ಜಾಗದ ಲಭ್ಯತೆಯ ಆಧಾರದಲ್ಲಿ ಮಕ್ಕಳ ಚಟುವಟಿಕೆಗಳಿಗೆ ಅವಕಾಶ ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಕಂಪನಿಗಳು, ಬಿಲ್ಡರ್‌ಗಳ ಸಹಾಯ ಪಡೆದು ಪಾರ್ಕ್ ಅಭಿವೃದ್ಧಿ ಮಾಡಲಾಗುವುದು ಎಂದರು.