ಬೆಂಗಳೂರು: ಪಂಚಮಸಾಲಿ ಸಮಾಜವನ್ನು ಪ್ರವರ್ಗ 2ಎಗೆ ಸೇರಿಸುವ ಕುರಿತ ನಿರ್ಧಾರವನ್ನು ಪ್ರಕಟಿಸಲು ಇಂದು ಸಂಜೆವರೆಗೆ ಕಾಲಾವಕಾಶ ನೀಡಲಿದ್ದು, ಅಷ್ಟರಲ್ಲಿ ಸರ್ಕಾರ ತನ್ನ ನಿರ್ಧಾರ ಪ್ರಕಟಿಸದಿದ್ದರೆ ಆಮರಣಾಂತರ ಉಪವಾಸ ಸತ್ಯಾಗ್ರಹ ಆರಂಭಿಸಲಾಗುತ್ತದೆ ಎಂದು ಕೂಡಲ ಸಂಗಮ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.
ನಗರದ ಫ್ರೀಡಂ ಪಾರ್ಕ್ನಲ್ಲಿ ಬಸವ ಜಯಮೃತ್ಯಂಜಯ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ 10 ದಿನ ಮುಗಿಸಿದ್ದು ಇಂದು ರಾಜ್ಯ ಸರ್ಕಾರಕ್ಕೆ ನೀಡಿದ ಡೆಡ್ ಲೈನ್ ಕೊನೆಯಾಗಲಿದೆ.
ಸಚಿವ ಸಂಪುಟ ಸಭೆಯಲ್ಲಿ ವಿವಿಧ ಸಮುದಾಯಗಳ ಮೀಸಲಾದ ಬೇಡಿಕೆ ಕುರಿತು ಅಧ್ಯಯನ ವರದಿ ನೀಡಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಮೂವರು ಸದಸ್ಯರ ಸಮಿತಿ ರಚಿಸಲು ನಿರ್ಧರಿಸಿದ್ದು, ಸಂಪುಟದ ಈ ನಿರ್ಧಾರವನ್ನು ಬಸವ ಜಯಮೃತ್ಯುಂಜಯ ವಿರೋಧಿಸಿದ್ದಾರೆ.
ಇದನ್ನೂ ಓದಿ: ರಾಜಕೀಯದಲ್ಲಿ ಉಳಿಯಲು ಶಶಿಕಲಾ ಮನವೊಲಿಸುವ ಪ್ರಯತ್ನ: ಟಿಟಿವಿ ದಿನಕರನ್
ಫ್ರೀಡಂ ಪಾರ್ಕ್ನಲ್ಲಿ ಬುಧವಾರ ಮಾತನಾಡಿದ ಶ್ರೀಗಳು, ನಿವೃತ್ತ ನ್ಯಾಯಮೂರ್ತಿಗಳ ಸಮಿತಿ ರಚಿಸಿದ ಸಂಪುಟದ ನಿರ್ಧಾರವನ್ನು ನಾವು ಒಪ್ಪುವುದಿಲ್ಲ. ನಮ್ಮ ಬೇಡಿಕೆ ಕುರಿತು ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಲು ನಾಳೆ ಸಂಜೆ 4 ಗಂಟೆವರೆಗೂ ಕಾಲಾವಕಾಶ ನೀಡಿದ್ದೇವೆ. ಅಲ್ಲಿಯವರೆಗೂ ಕಾದು ನೋಡುತ್ತೇವೆ, ಒಂದು ವೇಳೆ ನಮಗೆ ಸ್ಪಷ್ಟ ಭರವಸೆಯನ್ನು ಸದನದಲ್ಲಿಯಾದರೂ ಅಥವಾ ನೇರವಾಗಿ ಬಂದು ನಮಗೆ ತಿಳಿಸದೇ ಇದ್ದಲ್ಲಿ ಸಂಜೆ 6 ಗಂಟೆಗೆ ಶಾಸಕರು ಸಮುದಾಯದ ಮುಖಂಡರ ಸಭೆ ನಡೆಸಿ ಮುಂದಿನ ಹೋರಾಟದ ನಿರ್ಧಾರ ಕೈಗೊಳ್ಳಲಾಗುತ್ತದೆ. ಆಮರಣಾಂತ ಉಪವಾಸ ಸತ್ಯಾಗ್ರಹ ಯಾವಾಗಿನಿಂದ ಆರಂಭಿಸಬೇಕು?, ಎಲ್ಲಿ ಆರಂಭಿಸಬೇಕು? ಎನ್ನುವ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.