ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿ ನೀಡುವಂತೆ ಆಗ್ರಹಿಸಿ ನಡೆಯುತ್ತಿದ್ದ ಧರಣಿ ಸತ್ಯಾಗ್ರಹಕ್ಕೆ ಇಂದು ತೆರೆ ಬಿದ್ದಿದೆ.
ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್ನಲ್ಲಿ ಕಳೆದ 23 ದಿನಗಳಿಂದ ಧರಣಿ ನಡೆಯುತ್ತಿತ್ತು. ಇಂದು ಅಧಿವೇಶನದಲ್ಲಿ ಸಿಎಂ ಯಡಿಯೂರಪ್ಪ, ಪಂಚಮಸಾಲಿ ಸಮುದಾಯದ ಬೇಡಿಕೆ ಈಡೇರಿಸುವ ಬಗ್ಗೆ ಭರವಸೆ ನೀಡಿದ ಹಿನ್ನೆಲೆ ಹೋರಾಟ ಕೈಬಿಟ್ಟರು.
ಈ ಬಗ್ಗೆ ಮಾತನಾಡಿದ ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ನಮ್ಮ ಹೋರಾಟಕ್ಕೆ ಪ್ರಥಮ ಜಯ ಸಿಕ್ಕಿದೆ. ಸಂವಿಧಾನಬದ್ಧವಾದ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಆರು ತಿಂಗಳ ಒಳಗಾಗಿ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಧಿವೇಶನದಲ್ಲೇ ಭರವಸೆ ಕೊಟ್ಟಿರುವುದರಿಂದ ಇದು ನಮ್ಮ ಹೋರಾಟಕ್ಕೆ ಪ್ರಥಮ ಜಯವಾಗಿದ್ದು, ಕಳೆದ 23 ದಿನಗಳ ನಿರಂತರ ಧರಣಿ ಸತ್ಯಾಗ್ರಹ, 64 ದಿನಗಳ ನಿರಂತರ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದರು.
ಸಿಎಂ ಮಾತು ತಪ್ಪದ ಮಗ
ನಮ್ಮ ಹೋರಾಟಕ್ಕೆ ಆರು ತಿಂಗಳೊಳಗೆ ಜಯ ಸಿಕ್ಕಿದರೆ ಕೂಡಲಸಂಗಮದಲ್ಲಿ ಬಹಳ ದೊಡ್ಡ ವಿಜಯೋತ್ಸವ ಮಾಡಿ, ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇವೆ. ಸಿಎಂ ಅವರು ಮಾತಿಗೆ ತಪ್ಪದ ಮಗ, ಹೀಗಾಗಿ ಅವರು ಮಾತು ಕೊಟ್ಟಿದ್ದಾರೆ. ಮಾಡಿ ಕೊಟ್ಟೇ ಕೊಡುತ್ತಾರೆ ಎಂಬ ನಂಬಿಕೆ, ವಿಶ್ವಾಸ ಇದೆ. ನಮ್ಮ ಪಾದಯಾತ್ರೆ, ಹೋರಾಟವನ್ನು ಬಹಳ ಜನ ಕೆಡಿಸಲು ಯತ್ನಿಸಿದರು. ನಮ್ಮವರೇ ನಮಗೆ ತೊಂದರೆ ಕೊಟ್ಟರು, ಆದರೂ ದೃತಿಗೆಡದೆ ಮುಂದುವರೆದಿದ್ದಕ್ಕೆ, ಸತ್ಯಕ್ಕೆ ಜಯ ಸಿಕ್ಕಿದೆ ಎಂದರು.
ಶಾಸಕ ಬಸವನಗೌಡ ಪಾಟೀಲ ಯತ್ನಾಳ್, ಸಚಿವ ಬಸವರಾಜ ಬೊಮ್ಮಾಯಿ, ಹುಬ್ಬಳ್ಳಿ ಶಾಸಕ ಅರವಿಂದ ಬೆಲ್ಲದ ಅವರಿಗೆ ಧನ್ಯವಾದ ತಿಳಿಸಿದರು.