ಬೆಂಗಳೂರು: ಕಳೆದ 15 ದಿನಗಳಿಂದ ಕೇಂದ್ರ ಸರ್ಕಾರ ಆಕ್ಸಿಜನ್ ಕಳುಹಿಸುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಆಗಿದೆ. ಇಂದು ಐದನೇ ಹಂತದಲ್ಲಿ 160 ಟನ್ ಆಕ್ಸಿಜನ್ಅನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಕಳುಹಿಸಿಕೊಟ್ಟಿದೆ.
ಓದಿ: 120 ಟನ್ ಆಕ್ಸಿಜನ್ ಹೊತ್ತ 4ನೇ ರೈಲು ಕರ್ನಾಟಕಕ್ಕೆ.. ಸುಪ್ರೀಂಕೋರ್ಟ್‌ಗೆ ಧನ್ಯವಾದಗಳು..
ನಾಲ್ಕು ಹಂತಗಳಲ್ಲಿ 6 ಕಂಟೈನರ್ಗಳನ್ನ ಹೊತ್ತು ತರುತ್ತಿದ್ದ ರೈಲು, ಇಂದು 8 ಕಂಟೈನರ್ಗಳನ್ನ ಅಂದರೆ 40 ಟನ್ ಹೆಚ್ಚುವರಿಯಾಗಿ ತರಲಾಗಿದೆ. ಐದನೇ ಆಕ್ಸಿಜನ್ ಎಕ್ಸ್ಪ್ರೆಸ್ಅನ್ನು ಜಾರ್ಖಂಡ್ನ ಟಾಟಾ ನಗರದಿಂದ ಲೋಡ್ ಮಾಡಿ ಮೇ. 18ರಂದು ತನ್ನ ಪ್ರಯಾಣವನ್ನು ಪ್ರಾರಂಭಿಸಿ ಇಂದು ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಬೆಂಗಳೂರಿನ ವೈಟ್ ಫೀಲ್ಡ್ ಟರ್ಮಿನಲ್ಗೆ ಬಂದಿತು.
ಈ ಆಕ್ಸಿಜನ್ ಎಕ್ಸ್‌ಪ್ರೆಸ್‌ನ ತ್ವರಿತ ಸಾಗಣೆಯನ್ನು ಸಕ್ರಿಯಗೊಳಿಸಲು ರೈಲ್ವೆ ಸಿಗ್ನಲ್ ಮುಕ್ತ 'ಗ್ರೀನ್ ಕಾರಿಡಾರ್' ರಚಿಸಿ ಸಾಗಾಣಿಕೆಗೆ ಅನುವು ಮಾಡಿಕೊಟ್ಟಿದೆ. ಇಲ್ಲಿಯವರೆಗೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 640 ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು ರೈಲು ಮೂಲಕ ಕಳುಹಿಸಿದೆ. ಇದರಿಂದಾಗಿ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ರಾಜ್ಯ ಸರ್ಕಾರಗಳಿಗೆ ಸಹಾಯ ಮಾಡಲು ಅನುಕೂಲವಾಗಿದೆ.
ಕೇಂದ್ರ ಸರ್ಕಾರ ಆಕ್ಸಿಜನ್ ಕಳುಹಿಸಿಕೊಟ್ಟ ನಂತರ ಕರ್ನಾಟಕದಲ್ಲಿ ಆಕ್ಸಿಜನ್ ಸಮಸ್ಯೆ ಕಡಿಮೆಯಾಗಿ, ಸಾವಿನ ಸಂಖ್ಯೆ ಕೂಡ ಕಡಿಮೆ ಆಗಿದೆ. ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ 1200 ಟನ್ ಆಮ್ಲಜನಕವನ್ನು ನೀಡಬೇಕು ಎಂದು ತಿಳಿಸಿತ್ತು. ಕೋರ್ಟ್ ತೀರ್ಪಿನಂತೆ ಇದುವರೆಗೂ 640 ಟನ್ ಆಕ್ಸಿಜನ್ ನೀಡಿದೆ.