ಬೆಂಗಳೂರು: ಸರ್ಕಾರ ಮತ್ತು ಕಾರ್ಪೊರೇಟ್ ಸಂಸ್ಥೆಗಳ ಮಧ್ಯೆ ಯಾವುದೇ ಕಾರಣಕ್ಕೂ ಮೈತ್ರಿ ಆಗಬಾರದು. ಆ ಮೈತ್ರಿ ಚುನಾವಣೆಯನ್ನು ಹಾಳು ಮಾಡುತ್ತವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ವಿಧಾನಸಭೆಯಲ್ಲಿ ಚುನಾವಣೆ ಸುಧಾರಣೆ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಎಲೆಕ್ಟ್ರೋಲ್ ಬಾಂಡ್ ಖರೀದಿ ವ್ಯವಸ್ಥೆ ಸ್ಥಗಿತ ಆಗಬೇಕು ಎಂದರು.
2018ರಲ್ಲಿ ಬಿಜೆಪಿ ಪಕ್ಷಕ್ಕೆ 80% ಎಲೆಕ್ಟ್ರೋಲ್ ಬಾಂಡ್ ಬಂದಿದ್ದರೆ, ಕಾಂಗ್ರೆಸ್‌ಗೆ 9% ಬಂದಿತ್ತು. ಹೀಗಾಗಿ ರಾಜಕೀಯ ಪಕ್ಷಗಳ ಜೊತೆ ಕಾರ್ಪೊರೇಟ್ ಸಂಸ್ಥೆಗಳ ಮೈತ್ರಿಯನ್ನು ತಪ್ಪಿಸಬೇಕು ಎಂದು ಅಭಿಪ್ರಾಯಪಟ್ಟರು. ಈಗ ಹೊಸ ರೋಗ ಶಾಸಕರ ಆಪರೇಷನ್ ಶುರುವಾಗಿದೆ. ಹಾಗಾಗಿ ಒಂದು ಪಕ್ಷದಿಂದ ಗೆದ್ದರೆ ಪಕ್ಷ ನಿಷ್ಠೆ ಇರಬೇಕು. ಅರ್ಧದಲ್ಲಿ ಒಂದು ವೇಳೆ ಪಕ್ಷಾಂತರ ಮಾಡಿದರೆ, ಅಂತವರಿಗೆ 10 ವರ್ಷಗಳ ಕಾಲ ಚುನಾವಣೆಯಲ್ಲಿ ನಿಲ್ಲುವ ಅವಕಾಶ ನೀಡಬಾರದು. ಇದಕ್ಕೆ ಕೇಂದ್ರ ಸರ್ಕಾರ ಕಾನೂನಿಗೆ ತಿದ್ದುಪಡಿ ತರಲಿ ಎಂದು ಒತ್ತಾಯಿಸಿದರು.
ಒಂದು ರಾಷ್ಟ್ರ ಒಂದು ಚುನಾವಣೆ ತರಲು ಸಾಧ್ಯವಾಗುವುದಿಲ್ಲ. ಒಕ್ಕೂಟ ವ್ಯವಸ್ಥೆಗೆ ಅದು ಮಾರಕವಾಗಲಿದೆ. ಯಾವ ಪಕ್ಷಕ್ಕೂ ಬಹುಮತ ಬಂದಿಲ್ಲ. ಆಗ ರಾಷ್ಟ್ರಪತಿ ಆಳ್ವಿಕೆ ಇರಬೇಕು. ಇನ್ನೊಂದು ಚುನಾವಣೆ ಆಗುವವರೆಗೆ ರಾಷ್ಟ್ರಪತಿ ಚುನಾವಣೆ ಇರಲು ಅಸಾಧ್ಯ. ಒಂದು ರಾಷ್ಟ್ರ ಒಂದು ಚುನಾವಣೆ ವಾಸ್ತವದಲ್ಲಿ ಅಸಾಧ್ಯ ಎಂದು ತಿಳಿಸಿದರು.
ಇವಿಎಂ ಹ್ಯಾಕ್ ಪ್ರಸ್ತಾಪ: ದೇಶದಲ್ಲಿ 19 ಲಕ್ಷ ಇವಿಎಂ ಕಾಣೆಯಾಗಿದೆ. ಇದಕ್ಕೆ ಯಾರು ಜವಾಬ್ದಾರರು?.ಇವಿಯಂ ಹ್ಯಾಕ್ ಮಾಡಬಹುದು ಎಂಬ ಆರೋಪವು ಕೇಳಿ ಬರುತ್ತಿದೆ. ಈ ಬಗ್ಗೆ ಅನುಮಾನ ನಿವಾರಿಸುವ ಜವಾಬ್ದಾರಿ ಚುನಾವಣಾ ಆಯೋಗದ್ದು ಎಂದು ತಿಳಿಸಿದರು.
ನನ್ನ ಬಳಿ ಒಬ್ಬ ಇವಿಎಂ ಯಂತ್ರ ತೆಗೆದುಕೊಂಡು ಬಂದಿದ್ದ. ವೋಟ್ ಎಲ್ಲೋ ಹಾಕಿದರೆ ಎಲ್ಲೋ ಹೋಗುತ್ತದೆ ಎಂದು ತೋರಿಸಲು ಬಂದಿದ್ದ. ಸರ್ ನೀವು ವೋಟ್ ಹಾಕಿ ಅಂದ. ನಾನು ಹತ್ತು ವೋಟು ಕಾಂಗ್ರೆಸ್ ಗೆ ಹಾಕಿದೆ. 10 ಓಟ್‌ನಲ್ಲಿ 7 ವೋಟ್ ಬಿಜೆಪಿಗೆ ಬಿತ್ತು. ಮೂರು ವೋಟ್ ಕಾಂಗ್ರೆಸ್‌ಗೆ ಬಿದ್ದಿದೆ. ಅದು ನೈಜವೋ ಅಲ್ಲವೋ ಗೊತ್ತಿಲ್ಲ. ನಾನು ತಾಂತ್ರಿಕ ತಜ್ಞ ಅಲ್ಲ ಎಂಬ ಕಾರಣಕ್ಕೆ ಆಮೇಲೆ ನೋಡೋಣ ಅಂದು ಕಳುಹಿಸಿದೆ. ಆದರೆ ಹೀಗೆ ಮಾಡಬಹುದು ಎಂದು ತೋರಿಸಿಕೊಟ್ಟ ಎಂದರು.
ಇದನ್ನೂ ಓದಿ: ಅಪರ ಮುಖ್ಯ ಕಾರ್ಯದರ್ಶಿ ಮೂಲಕ ಭೂ ಅವ್ಯವಹಾರ ತನಿಖೆ : ಸಚಿವ ನಿರಾಣಿ