ಬೆಂಗಳೂರು : ಕುಡಿಯುವ ನೀರು, ಬಡವರಿಗೆ ಮನೆ ನೀಡುವ ವಿಚಾರ ಸೇರಿ ಅರ್ಹ ಫಲಾನುಭವಿಗಳಿಗೆ ವಿವಿಧ ಯೋಜನೆಗಳನ್ನು ತಲುಪಿಸಿದ ಸಂತಸ ನಮ್ಮ ಸರ್ಕಾರದ್ದು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಾವು ಅರ್ಹ ಫಲಾನುಭವಿಗಳನ್ನು ತಲುಪಿದ್ದೇವೆ. ಭಾರತ ಸುವರ್ಣ ಕಾಲದತ್ತ ಮುನ್ನಡೆಯುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಬಿಜೆಪಿ ರಾಜ್ಯ ಆರ್ಥಿಕ ಪ್ರಕೋಷ್ಠದ ವತಿಯಿಂದ ಬೆಂಗಳೂರಿನ ಜೆಡಬ್ಲ್ಯೂ ಮ್ಯಾರಿಯೆಟ್ ಹೋಟೆಲ್‍ನಲ್ಲಿ 'ವಿಶ್ವಗುರು ಭಾರತ' 100ನೇ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, 2014ರಿಂದ ಇಂದಿನ ನಡುವಿನ ಅವಧಿಯಲ್ಲಿ ಕೇಂದ್ರ ಸರಕಾರದ ಸಾಧನೆಗಳನ್ನು ವಿವರಿಸಿದ ಅವರು, ಹಿಂದಿನ ಆಡಳಿತಗಳು 20 ಅಂಶಗಳ ಕಾರ್ಯಕ್ರಮ, ಗರೀಬಿ ಹಠಾವೋ ಯೋಜನೆಗಳು ಅರ್ಧ ಪೂರ್ಣವಾಗಿತ್ತು. ಆದರೆ ಅರ್ಹ ಫಲಾನುಭವಿಗಳನ್ನು ತಲುಪಲಿಲ್ಲ ಎಂದರು.
ತಂತ್ರಜ್ಞಾನ ಆಧಾರಿತ ಸೌಲಭ್ಯ : ಪ್ರತಿ ನಾಗರಿಕರಿಗೆ ಮೂಲಸೌಕರ್ಯ ಕೊಡಲು ಸಾಧ್ಯವಾಗಿದೆ. ಪ್ರತಿ ನಾಗರಿಕರು ಕನಿಷ್ಠ ಮೂಲಸೌಕರ್ಯಕ್ಕೆ ಅರ್ಹರಿದ್ದು, ಅದನ್ನು ಕೊಡಲಾಗುತ್ತಿದೆ. ಬಳಿಕ ಅವರ ಸಶಕ್ತೀಕರಣದತ್ತ ಕೇಂದ್ರದ ಬಿಜೆಪಿ ಸರ್ಕಾರ ಶ್ರಮಿಸುತ್ತಿದೆ. ತಂತ್ರಜ್ಞಾನ ಆಧಾರಿತ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಇದಕ್ಕೆ ಒಂದು ದೇಶ- ಒಂದೇ ಪಡಿತರಚೀಟಿ ಯೋಜನೆ ಸ್ಪಷ್ಟ ಉದಾಹರಣೆ ಎಂದು ತಿಳಿಸಿದರು.
ಪಿಎಂ ಜನಧನ್ ಯೋಜನೆ ಮೂಲಕ ಎಲ್ಲರೂ ಬ್ಯಾಂಕ್ ಖಾತೆ ತೆರೆಯುವಂತೆ ಮಾಡಲಾಯಿತು. ಆರ್ಥಿಕ ಒಳಗೊಳ್ಳುವಿಕೆಗೆ ಇದು ಪೂರಕವೆನಿಸಿತು. ಇದರಿಂದ ಅರ್ಹರಿಗೆ ನೇರ ಸೌಲಭ್ಯ ವರ್ಗಾವಣೆ (ಡಿಬಿಟಿ) ಸಾಧ್ಯವಾಯಿತು. ಆಧಾರ್ ಜೋಡಿಸಲು ಸಾಧ್ಯವಾಯಿತು. ಪಿಎಂ ಮುದ್ರಾ ಜಾರಿಗೊಳಿಸಲಾಯಿತು. ಮಹಿಳಾ ಸಶಕ್ತೀಕರಣವೂ ಇದರಿಂದ ಸಾಧ್ಯವಾಗಿದೆ ಎಂದರು.
ದೇಶದೆಲ್ಲೆಡೆ ಉದ್ಯಮಶೀಲತೆ : ಪಿಎಂ ಸ್ವನಿಧಿ ಮೂಲಕ ಬೀದಿಬದಿ ವ್ಯಾಪಾರಿಗಳು ಬಡ್ಡಿರಹಿತ ಹಣ ಪಡೆದು ವ್ಯವಹಾರ ಮಾಡಲು ಸಾಧ್ಯವಾಗಿದೆ. ಸ್ಟಾರ್ಟಪ್ ಮೂಲಕ ಬೆಂಗಳೂರು ಮಹತ್ವದ ಸಾಧನೆ ಮಾಡಿದೆ. ದೇಶದೆಲ್ಲೆಡೆ ಉದ್ಯಮಶೀಲತೆಗೆ ಇದು ನೆರವಾಗಿದೆ. ಪಿಎಂ ಆವಾಸ್ ಯೋಜನೆ ಅತ್ಯಂತ ಜನಪ್ರಿಯವಾದುದು. ಆದರೆ, ಕೆಲ ರಾಜ್ಯಗಳಲ್ಲಿ ಇದನ್ನು ಬೇರೆ ಹೆಸರಿನೊಂದಿಗೆ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಸ್ವಚ್ಛತಾ ಯೋಜನೆ, ಎಂಎಸ್‍ಎಂಇಗಳಿಗೆ ಹಣಕಾಸು ನೆರವು ನೀಡಲಾಗಿದೆ. ಹಾಗೆಂದು ಮೂಲ ಅವಶ್ಯಕತೆಗಳೆನಿಸಿದ ರಸ್ತೆ, ವಿಮಾನನಿಲ್ದಾಣಗಳನ್ನು ನಮ್ಮ ಸರ್ಕಾರ ಮರೆತಿಲ್ಲ. ಉಡಾನ್ ಯೋಜನೆ ಜಾರಿಯಿಂದ 65 ಲಕ್ಷ ಜನರಿಗೆ ಪ್ರಯೋಜನವಾಗಿದೆ. ಜನರನ್ನು ಸಶಕ್ತೀಕರಣಗೊಳಿಸಬೇಕು ಎಂಬ ಚಿಂತನೆಯೊಂದಿಗೆ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲೂ ಕಡಿಮೆ ಅಭಿವೃದ್ಧಿ ಹೊಂದಿದ ಜಿಲ್ಲೆಗಳ ಪ್ರಗತಿಗೆ ಆದ್ಯತೆ ಕೊಡಲಾಗಿದೆ ಎಂದು ವಿವರಿಸಿದರು.
ಗ್ರಾಮ ಪಂಚಾಯತ್ಗೆ ಆಪ್ಟಿಕಲ್ ಫೈಬರ್ ಸಂಪರ್ಕ : ರಾಜಕೀಯ ಲಾಭ ದೂರವಿಟ್ಟು ಅಭಿವೃದ್ಧಿಗೆ ನೇರ ಅನುದಾನ ಕೊಡಲಾಗಿದೆ. ದೇಶದ ಪ್ರತಿ ಪಂಚಾಯತ್ ಮಟ್ಟಕ್ಕೆ ಆಪ್ಟಿಕಲ್ ಫೈಬರ್ ಸಂಪರ್ಕ ತಲುಪಿದ್ದು, ಇದು ಶಿಕ್ಷಣ, ಆರೋಗ್ಯ ಸುಧಾರಣೆಗೆ ನೆರವಾಗುತ್ತಿದೆ. ದೇಶದಲ್ಲಿ 5ಜಿ ಸೇವೆ ಶೀಘ್ರವೇ ಕಾರ್ಯಾರಂಭ ಮಾಡಲಿದೆ. ಹರಾಜು ಈಗಾಗಲೇ ಮುಗಿದಿದೆ ಎಂದು ತಿಳಿಸಿದರು.
ಸಾರ್ವಜನಿಕ ರಂಗದ ಬ್ಯಾಂಕ್‍ಗಳು ಇದೀಗ ಅತ್ಯುತ್ತಮ ಸ್ಥಿತಿಗೆ ತಲುಪಿವೆ. ಲಾಭ ಮಾಡುತ್ತಿವೆ. ಬ್ಯಾಂಕ್ ಹಣ ಲೂಟಿ ಮಾಡಿದವರ ಆಸ್ತಿಯನ್ನು ಹರಾಜು ಹಾಕಿ ಹಣ ಪಡೆದು ಬ್ಯಾಂಕ್‍ಗಳಿಗೆ ಕೊಡಲಾಗುತ್ತಿದೆ. ಲೂಟಿ ಮಾಡಿದವರನ್ನು ಹಾಗೇ ಬಿಡುವ ಪ್ರವೃತ್ತಿಗೆ ವಿದಾಯ ಹೇಳಲಾಗಿದೆ ಎಂದರು.
ಇದನ್ನೂ ಓದಿ : ಹರ್ ಘರ್ ತಿರಂಗಾ ಅಭಿಯಾನ ವೇಳೆ ಮಾಜಿ ಡಿಸಿಎಂ ನಿತಿನ್ ಪಟೇಲ್ಗೆ ಗುದ್ದಿದ ಬಿಡಾಡಿ ದನ