ಬೆಂಗಳೂರು: ವಿಧಾನ ಪರಿಷತ್ಗೆ ನೂತನವಾಗಿ ಆಯ್ಕೆಯಾದ ಸದಸ್ಯರು ಇಂದು ಪ್ರಮಾಣವಚನ ಸ್ವೀಕರಿಸಿದರು. ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿಂದು ನಡೆದ ಸರಳ ಸಮಾರಂಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಸಿಎಂ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ಅವರು ನೂತನ ಶಾಸಕರ ಹೆಸರುಗಳನ್ನು ಕರೆದರು. ಪ್ರಮಾಣವಚನ ಸ್ವೀಕರಿಸಿದ ಸದಸ್ಯರಿಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಹೂಗುಚ್ಛ ನೀಡಿ ಅಭಿನಂದಿಸಿದರು.
25 ಸ್ಥಾನಗಳಿಗೆ ನಡೆದಿತ್ತು ಚುನಾವಣೆ:
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ನ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ-11, ಕಾಂಗ್ರೆಸ್ -11, ಜೆಡಿಎಸ್ -2 ಹಾಗೂ ಪಕ್ಷೇತರ ಅಭ್ಯರ್ಥಿ 1 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು. ಕೊಡಗು, ಧಾರವಾಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಬಳ್ಳಾರಿ, ಶಿವಮೊಗ್ಗ, ಕಲಬುರಗಿ, ಉತ್ತರ ಕನ್ನಡ, ಚಿತ್ರದುರ್ಗ, ಬೆಂಗಳೂರು ನಗರ, ವಿಜಯಪುರದಲ್ಲಿ ಒಟ್ಟು 11 ಸ್ಥಾನಗಳಲ್ಲಿ ಬಿಜೆಪಿಗೆ ಗೆಲುವು ಸಿಕ್ಕಿದೆ. ಬೀದರ್, ವಿಜಯಪುರ, ದಕ್ಷಿಣ ಕನ್ನಡ, ಕೋಲಾರ-ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಧಾರವಾಡ, ರಾಯಚೂರು, ಬೆಳಗಾವಿ, ಮಂಡ್ಯ, ಮೈಸೂರು, ತುಮಕೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. 2 ಸ್ಥಾನಗಳಲ್ಲಿ ಜೆಡಿಎಸ್ ಪಕ್ಷಕ್ಕೆ ಗೆಲುವು ಸಿಕ್ಕಿದೆ. ಬೆಳಗಾವಿಯಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದರು.
ಪ್ರಮಾಣವಚನ ಸ್ವೀಕರಿಸಿದ ಸದಸ್ಯರು:
- ಬೆಂಗಳೂರು ನಗರ- ಬಿಜೆಪಿ ಅಭ್ಯರ್ಥಿ ಹೆಚ್.ಎಸ್. ಗೋಪಿನಾಥ್ ರೆಡ್ಡಿ
- ಬೆಂಗಳೂರು ಗ್ರಾಮಾಂತರ- ಕಾಂಗ್ರೆಸ್ ಅಭ್ಯರ್ಥಿ ಎಸ್. ರವಿ
- ಕೊಡಗು- ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ
- ದಕ್ಷಿಣ ಕನ್ನಡ ದ್ವಿಸದಸ್ಯ ಕ್ಷೇತ್ರ : ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್‌ನ ಮಂಜುನಾಥ ಭಂಡಾರಿ
- ಚಿಕ್ಕಮಗಳೂರು- ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್
- ಶಿವಮೊಗ್ಗ- ಬಿಜೆಪಿ ಅಭ್ಯರ್ಥಿ ಡಿ.ಎಸ್. ಅರುಣ್
- ಧಾರವಾಡ ದ್ವಿಸದಸ್ಯ ಕ್ಷೇತ್ರ- ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಹಾಗೂ ಬಿಜೆಪಿ ಅಭ್ಯರ್ಥಿ ಪ್ರದೀಪ್ ಶೆಟ್ಟರ್
- ಕಲಬುರಗಿ- ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲ್
- ಚಿತ್ರದುರ್ಗ- ಬಿಜೆಪಿ ಅಭ್ಯರ್ಥಿ ಕೆ.ಎಸ್. ನವೀನ್
- ಬಳ್ಳಾರಿ- ಬಿಜೆಪಿ ಅಭ್ಯರ್ಥಿ ವೈ.ಎಂ. ಸತೀಶ್
- ಹಾಸನ- ಜೆಡಿಎಸ್ ಅಭ್ಯರ್ಥಿ ಡಾ. ಸೂರಜ್ ರೇವಣ್ಣ
- ಉತ್ತರ ಕನ್ನಡ- ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್
- ಬೀದರ್- ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್
- ಮಂಡ್ಯ- ಕಾಂಗ್ರೆಸ್ ಅಭ್ಯರ್ಥಿ ಎಂ.ಜಿ. ದಿನೇಶ್ ಗೂಳಿಗೌಡ
- ಕೋಲಾರ- ಕಾಂಗ್ರೆಸ್ ಅಭ್ಯರ್ಥಿ ಎಂ.ಎಲ್. ಅನಿಲ್ ಕುಮಾರ್
- ತುಮಕೂರು- ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ರಾಜಣ್ಣ
- ಬೆಳಗಾವಿ ದ್ವಿಸದಸ್ಯ ಕ್ಷೇತ್ರ- ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ
- ಬೆಳಗಾವಿ- ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ
- ರಾಯಚೂರು- ಕಾಂಗ್ರೆಸ್‌ನ ಶರಣಗೌಡ ಪಾಟೀಲ್ ಬಯ್ಯಾಪುರ
- ಮೈಸೂರು- ಜೆಡಿಎಸ್ನ ಸಿ.ಎನ್. ಮಂಜೇಗೌಡ
- ವಿಜಯಪುರ ದ್ವಿಸದಸ್ಯ ಕ್ಷೇತ್ರ : ಕಾಂಗ್ರೆಸ್‌ನ ಸುನಿಲ್ ಗೌಡ ಪಾಟೀಲ್ ಹಾಗೂ ಬಿಜೆಪಿಯ ಪಿ.ಹೆಚ್. ಪೂಜಾರ್
ಕೋವಿಡ್ ನಿಯಮ ಧೂಳಿಪಟ:
ಪ್ರಮಾಣವಚನ ಸ್ವೀಕಾರ ಸಂದರ್ಭದಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸದಿರುವುದು ಎದ್ದು ಕಂಡಿತು. ರಾಜಕೀಯ ಮುಖಂಡರು ಕೂಡ ಗುಂಪು ಗುಂಪಾಗಿ ಕಾರ್ಯಕ್ರಮಕ್ಕೆ ಆಗಮಿಸಿದರು. ಬಹುತೇಕರು ಮಾಸ್ಕ್ ಹಾಕಿರಲಿಲ್ಲ, ಸಾಮಾಜಿಕ ಅಂತರವೂ ಇರಲಿಲ್ಲ. ನೂತನ ಸದಸ್ಯರಿಗೆ ಶುಭಕೋರಲು ಅಭಿಮಾನಿಗಳು ಒಂದೇ ಬಾರಿ ನುಗ್ಗಿದ್ದರಿಂದ ನೂಕುನುಗ್ಗಲು ಉಂಟಾಯಿತು.
ಮುಖ್ಯಮಂತ್ರಿ ಜೊತೆ ಫೋಟೋ ತೆಗೆಸಿಕೊಳ್ಳಲು ನೂತನ ಪರಿಷತ್ ಸದಸ್ಯರು ಹಾಗೂ ಕುಟುಂಬದವರು ಮುಗಿಬಿದ್ದ ದೃಶ್ಯ ಕಂಡು ಬಂತು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆ ವೇಳೆ ಸಹ ಹೊರಗಡೆ ಜನಜಂಗುಳಿ ಹೆಚ್ಚಾಗಿತ್ತು. ಕೋವಿಡ್ನ ಯಾವುದೇ ನಿಯಮ ಇಲ್ಲಿ ಪಾಲನೆಯಾದಂತೆ ಕಂಡು ಬರಲಿಲ್ಲ. ಕ್ಯಾಬಿನೆಟ್ ಹಾಲ್ ಮುಂದೆಯೇ ಜನ ಜಾತ್ರೆಯಾಗಿತ್ತು. ನಂತರ ಎಚ್ಚೆತ್ತ ಪೊಲೀಸರು ಜನರನ್ನು ಹೊರಗೆ ಕಳುಹಿಸಿದರು.