ಬೆಂಗಳೂರು: ರಾತ್ರಿ ವೇಳೆ ನಿರ್ಜನ ಪ್ರದೇಶಕ್ಕೆ ಯುವಕ-ಯುವತಿ ಹೋಗಬಾರದಿತ್ತು ಎಂದು ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಯೂಟರ್ನ್ ಹೊಡೆದಿದ್ದು, ನಾನು ಆ ರೀತಿ ಹೇಳಿಯೇ ಇಲ್ಲ ಎಂದಿದ್ದಾರೆ.
ಕುಮಾರಕೃಪಾ ಅತಿಥಿಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರಿಗೆ ಹೋಗಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ನಂತರ ಅತ್ಯಾಚಾರ ಪ್ರಕರಣ ಕುರಿತು ಹೆಚ್ಚಿನ ಮಾಹಿತಿ ನೀಡುತ್ತೇನೆ. ಇದೊಂದು ಅಮಾನವೀಯ ಕೃತ್ಯವಾಗಿದ್ದು, ಪ್ರಕರಣ ಸಂಬಂಧ ನಮ್ಮ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಆರಗ ಜ್ಞಾನೇಂದ್ರ ಯೂ-ಟರ್ನ್!!
ಸಂತ್ರಸ್ತ ಯುವತಿ ನಿರ್ಜನ ಪ್ರದೇಶಕ್ಕೆ ಹೋಗಬಾರದಿತ್ತು ಎನ್ನುವ ಗೃಹ ಸಚಿವರ ಹೇಳಿಕೆಗೆ ವಿವಿಧ ಸಂಘಟನೆಗಳಿಂದ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಯೂ ಟರ್ನ್ ಹೊಡೆದಿದ್ದು, ನಾನು ಆ ರೀತಿ ಹೇಳಿಕೆ ನೀಡಿಲ್ಲ ಎಂದಿದ್ದಾರೆ. ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಿಂದ ಸತ್ಯಶೋಧನಾ ಸಮಿತಿ ರಚನೆ ಮಾಡಿದ್ದಾರೆ. ಅವರು ವಿರೋಧ ಪಕ್ಷವಾಗಿ ವಿರೋಧ ಮಾಡುತ್ತಾರೆ ಮಾಡಲಿ. ಸಮಿತಿಯನ್ನೂ ಮಾಡಿಕೊಳ್ಳಲಿ ಎಂದ ಗೃಹ ಸಚಿವರು, ನಾನು ಮೈಸೂರಿನಲ್ಲಿ ಉಳಿದ ವಿಷಯಗಳ ಕುರಿತು ಪ್ರತಿಕ್ರಿಯೆ ಕೊಡುತ್ತೇನೆ ಎಂದಿದ್ದಾರೆ.
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ(Gangrape) ಪ್ರಕರಣ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಜವಾಬ್ದಾರಿಯುತ ಸ್ಥಾನದಲ್ಲಿರುವ ಗೃಹ ಸಚಿವರು ಇಂತಹ ಹೇಳಿಕೆ ನೀಡಿರುವುದು ಸರಿಯಲ್ಲ. ಕೂಡಲೇ ತಮ್ಮ ಹೇಳಿಕೆ ಹಿಂಪಡೆಯಬೇಕೆಂದು ಕೆಲ ಸಂಘಟನೆಗಳು ಒತ್ತಾಯಿಸಿವೆ. ಶೇಷಾದ್ರಿ ರಸ್ತೆಯಲ್ಲಿರುವ ಬಂದೀಖಾನೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಸಚಿವರು ಈ ರೀತಿಯ ಹೇಳಿಕೆ ನೀಡಿದ್ದರು.
ಕಾಂಗ್ರೆಸ್ನಿಂದ ಗೃಹ ಸಚಿವರ ರಾಜೀನಾಮೆ ಒತ್ತಾಯ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಆರಗ ಜ್ಞಾನೇಂದ್ರ, ಅತ್ಯಾಚಾರ ಆಗಿರೋದು ಮೈಸೂರಿನಲ್ಲಿ. ಆದರೆ ಕಾಂಗ್ರೆಸ್ ನವರು ನನ್ನನ್ನೇ ರೇಪ್ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ವಿಚಾರದಲ್ಲಿ ಹೀಗೆ ಮಾಡುವುದಕ್ಕೆ ಹೋಗಬಾರದು. ಈ ಪ್ರಕರಣದಲ್ಲೂ ರಾಜಕೀಯ ಮಾಡಲು ಹೋಗಬಾರದು ಎಂದು ಹೇಳಿದರು.
ಘಟನೆಗೂ ಮುಂಚೆ ಯುವಕ-ಯುವತಿ ಅಂದು ರಾತ್ರಿ 7.30ಕ್ಕೆ ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ. ಅಷ್ಟೊತ್ತಿಗೆ ಅಲ್ಲಿ ಹೋಗಬಾರದಿತ್ತು. ಆದರೆ ಹೋಗಬೇಡಿ ಅಂತಾ ತಡೆಯೋದಕ್ಕೂ ಆಗೋದಿಲ್ಲ. ಸದ್ಯಕ್ಕೆ ಯುವಕ, ಯುವತಿ ಶಾಕ್‌ನಲ್ಲಿ ಇದ್ದಾರೆ. ಅವರ ಸಂಪೂರ್ಣ ಹೇಳಿಕೆ ಪಡೆಯಲು ಆಗಿಲ್ಲ. ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದರು.