ಬೆಂಗಳೂರು: ಪಶ್ಚಿಮಘಟ್ಟ ಕಸ್ತೂರಿ ರಂಗನ್ ವರದಿ ಅನುಷ್ಠಾನದಲ್ಲಿನ ಬದಲಾವಣೆ ಕುರಿತು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಂದೀಪ್ ದವೆ ಅವರನ್ನು ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಎಂ.ಪಿ.ಕುಮಾರಸ್ವಾಮಿ ಭೇಟಿ ಮಾಡಿ ಚರ್ಚೆ ನಡೆಸಿದರು.
ಎಂ.ಎಸ್.ಬಿಲ್ಡಿಂಗ್ನಲ್ಲಿರುವ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ಕಚೇರಿಗೆ ನಿನ್ನೆ ಭೇಟಿ ನೀಡಿದ ಕುಮಾರಸ್ವಾಮಿ, ಕಸ್ತೂರಿ ರಂಗನ್ ವರದಿ ಅನುಷ್ಠಾನದಲ್ಲಿನ ಬದಲಾವಣೆ ಕುರಿತು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸಿ ಮಾಹಿತಿ ಪಡೆದರು. ಜೊತೆಗೆ ವರದಿಯಲ್ಲಿನ ಮಾರ್ಪಾಡು ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಮನವಿ ಮಾಡಿದರು.
ಈ ಬಗ್ಗೆ ಮಾಹಿತಿ ನೀಡಿದ ಸಂದೀಪ್ ದವೆ, ಕಸ್ತೂರಿ ರಂಗನ್ ವರದಿ ಮಾರ್ಪಾಡು ಹಾಗೂ ಹಸಿರು ನ್ಯಾಯಾಧಿಕರಣ ಕುರಿತು ಕೇಂದ್ರ ಸರ್ಕಾರದ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಸಚಿವರಿಗೆ ಪತ್ರ ಬರೆದಿರುವ ಹಿನ್ನಲೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ಇದ್ದ ಹಸಿರು ನ್ಯಾಯಾಧಿಕರಣ ಅಂತಿಮ ತೀರ್ಪನ್ನು ಜೂನ್ 31ಕ್ಕೆ ಮುಂದೂಡಲಾಗಿದೆ. ಇದರಿಂದಾಗಿ ಮಾರ್ಪಾಡು ಮಾಡಲು ಕಾಲಾವಕಾಶ ಸಿಕ್ಕಿದೆ. ಸಂಬಂಧಪಟ್ಟ ಕೇಂದ್ರ ಸಚಿವರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದು, ಇದು ಮುಗಿದ ಬಳಿಕ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಆ ಸಂದರ್ಭದಲ್ಲಿ ಚರ್ಚೆ ನಡೆಸುವುದಾಗಿ ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಎಂ.ಪಿ.ಕುಮಾರಸ್ವಾಮಿ, ಕೇಂದ್ರ ಸರ್ಕಾರಕ್ಕೆ ಈ ವರದಿ ಕುರಿತು ನ್ಯಾಯಾಲಯ, ಪ್ರಾಧಿಕಾರದಲ್ಲಿ ಪ್ರಶ್ನಿಸುವ ಅಧಿಕಾರವಿದೆ. ಆದರೆ ರಾಜ್ಯ ಸರ್ಕಾರ ಕೇವಲ ಇದಕ್ಕೆ ಸಂಬಂಧಿಸಿದ ಕೆಲ ಅಂಶಗಳನ್ನು ಫೀಡ್ ಮಾಡಬಹುದಾಗಿದೆ. ಡಿಸೆಂಬರ್ ಅಂತ್ಯದಲ್ಲಿದ್ದ ಹಸಿರು ನ್ಯಾಯಾಧಿಕರಣದ ಅಂತಿಮ ತೀರ್ಪನ್ನು ಜೂನ್ 31ರವರೆಗೆ ಮುಂದೂಡಿರುವುದರಿಂದ ರಾಜ್ಯ ಸರ್ಕಾರ ವರದಿಯಲ್ಲಿನ ಅಂಶಗಳ ಬದಲಾವಣೆ ಬಗ್ಗೆ ಕೈಗೊಳ್ಳಬೇಕಾದ ಪ್ರಕ್ರಿಯೆಗೆ ಕಾಲಾವಕಾಶ ಸಿಕ್ಕಿದೆ ಎಂದರು.
ಇನ್ನು ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವುದು ಉತ್ತಮ ಬೆಳವಣಿಗೆ. ಕಸ್ತೂರಿ ರಂಗನ್ ವರದಿ ಕುರಿತು ಮಲೆನಾಡು ಸೇರಿದಂತೆ ಕೆಲ ಭಾಗದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳನ್ನು ಮತ್ತೊಮ್ಮೆ ಭೇಟಿ ಮಾಡಿ ಮನವಿ ಮಾಡುವುದಾಗಿ ಹೇಳಿದರು.