ಬೆಂಗಳೂರು: ಸಚಿವ ಸ್ಥಾನ ನೀಡಿಲ್ಲ ಅಂತ ಬೇಸರವಿದೆಯೇ ಹೊರತು ಅಸಮಾಧಾನವಿಲ್ಲ. ನನಗೆ ಸಚಿವ ಸ್ಥಾನ ಸಿಗಬೇಕಿತ್ತು. ಪಕ್ಷ, ಸಂಘದಿಂದಲೂ ನನಗೆ ಸಚಿವ ಸ್ಥಾನದ ಭರವಸೆ ಸಿಕ್ಕಿತ್ತು. ಕೊನೆ ಗಳಿಗೆಯಲ್ಲಿ ಸಚಿವ ಸ್ಥಾನ ಕೈತಪ್ಪಿದೆ. ಈ ಸಂಬಂಧ ನಮ್ಮ ನಾಯಕರಾದ ಮುಖ್ಯಮಂತ್ರಿಗಳ ಬಳಿ ಮಾತಾಡಿದೀನಿ. ಮುಂದಿನ ದಿನಗಳಲ್ಲಿ ಒಳ್ಳೆದಾಗುತ್ತೆ, ಚಿಂತೆ ಮಾಡಬೇಡ ಅಂತ ಸಿಎಂ ಹೇಳಿದ್ದಾರೆ ಎಂದು ಡಾಲರ್ಸ್ ಕಾಲೋನಿಯಲ್ಲಿ ಸಿಎಂ ಯಡಿಯೂರಪ್ಪ ಭೇಟಿ ಬಳಿಕ ಸುರಪುರ ಶಾಸಕ ರಾಜುಗೌಡ ಪ್ರತಿಕ್ರಿಯಿಸಿದರು.
ನಮ್ಮ ಜಿಲ್ಲೆ ಯಾದಗಿರಿಗೂ ಒಂದು ಸಚಿವ ಸ್ಥಾನ ನೀಡಿಲ್ಲ. ಯಡಿಯೂರಪ್ಪನವರು ನನಗೆ ಸಚಿವ ಸ್ಥಾನ ಸಿಗುತ್ತೆ ಅಂದಿದ್ದರು. ಇದರಿಂದ ಕುಟುಂಬದವರು, ಕ್ಷೇತ್ರದ ಜನರು ಖುಷಿಯಾಗಿದ್ರು, ಈಗ ಬೇಸರ ಆಗಿದ್ದಾರೆ. ನಾನು ಪಕ್ಷಕ್ಕಾಗಿ ದುಡಿದಿದ್ದೇನೆ. ಆದರೆ ನಮ್ಮವರೇ ನನಗೆ ಸಚಿವ ಸ್ಥಾನ ತಪ್ಪಿಸಿಬಿಟ್ರು. ನಾನು ನೋ ಬಾಲ್ಗೆ ಔಟ್ ಆಗೋದ್ನಲ್ಲ ಅನ್ನೋದೆ ನನಗೆ ಬೇಜಾರು ಅಂತ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ನನಗೆ ಸಚಿವ ಸ್ಥಾನ ಕೊಡಿಸಬೇಕು ಅಂತಾ ಯಡಿಯೂರಪ್ಪ ಪ್ರಯತ್ನ ಮಾಡಿದರು. ಆದರೆ ಅದಕ್ಕೆ ಕೆಲವರು ಅಡ್ಡಿಪಡಿಸೋದ್ರ ಮೂಲಕ ನನಗೆ ಸಚಿವ ಸ್ಥಾನ ಸಿಗುವುದನ್ನು ತಪ್ಪಿಸಿದರು. ಬೇಸರ ಆಗಿದೆ, ಆದ್ರೆ ಅಸಮಾಧಾನ ಇಲ್ಲ ಎಂದು ಹೇಳಿದರು.
ಇದೇ ವೇಳೆ ಹೊಸದಾಗಿ ಸಚಿವರಾದವರಿಗೆ ಒಳ್ಳೆಯದಾಗಲಿ. ನನಗೆ ಸಚಿವ ಸ್ಥಾನ ತಪ್ಪಿಸಿದವರಿಗೂ ಒಳ್ಳೆಯದಾಗಲಿ. ನಾನೊಬ್ಬ ಸ್ಪೋರ್ಟ್ಸ್ ಮ್ಯಾನ್. ಆಟದಲ್ಲಿ ಸೋಲು ಗೆಲುವು ಕಂಡಿರುವೆ. ನಾನು ಇನ್ನೂ ಚಿಕ್ಕವನು, ಮುಂದೆ ಆಟದಲ್ಲಿ ಮತ್ತೆ ಗೆಲ್ಲುತ್ತೇನೆ ಎಂದರು.
ಹೈದರಾಬಾದ್ ಕರ್ನಾಟಕ ಭಾಗದಲ್ಲಿ 15-16 ಶಾಸಕರು ಗೆದ್ದಿದ್ದೀವಿ. ಇನ್ನೂ 3-4 ಶಾಸಕರಿಗೆ ಸಚಿವ ಸ್ಥಾನ ಕೊಡಬೇಕಿತ್ತು. ಹಿಂದೆ ಸಚಿವನಾಗಿ ಕೆಲಸ ಮಾಡಿದ್ದೇನೆ. ಹಾಗಾಗಿ ನಿಗಮ ಮಂಡಳಿ ನಿರೀಕ್ಷೆ ಇಟ್ಕೊಂಡಿಲ್ಲ. ನಮ್ಮ ವಾಲ್ಮೀಕಿ ಸಮಯದಾಯಕ್ಕೆ ಶೇ. 7.5 ಮೀಸಲಾತಿ ಕೊಡಲಿ ಅಷ್ಟೇ ಸಾಕು ನನಗೆ ಅಂತ ಹೇಳಿದ್ರು.