ಬೆಂಗಳೂರು: ನಾರಾಯಣಗುರು, ಭಗತ್ ಸಿಂಗ್ ವಿಷಯವನ್ನು ಪಠ್ಯದಿಂದ ಕೈ ಬಿಡಲಾಗಿದೆ ಅಂತ ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ. ಶಿಕ್ಷಣ ಸಚಿವರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತಾಡಿದ್ದೇನೆ. ಸಮಾಜ ಪುಸ್ತಕದಲ್ಲಿ ವಿಷಯವನ್ನು ಕನ್ನಡ ಪುಸ್ತಕಕ್ಕೆ ಸೇರಿಸಲಾಗಿದೆ. ನಾರಾಯಣಗುರು, ಭಗತ್ ಸಿಂಗ್ ವಿಚಾರವನ್ನು ಕೈಬಿಟ್ಟಿಲ್ಲ ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು.
ವಿಧಾನಸೌಧಲ್ಲಿ ಮಾತನಾಡಿದ ಅವರು, ಹೆಡಗೆವಾರ್ ಅವರ ವಿಚಾರ ಪಠ್ಯದಲ್ಲಿ ಸೇರಿಸಿರೋದಕ್ಕೆ ತಪ್ಪೇನಿದೆ?. ಹೆಡಗೆವಾರ್ ಅವರ ವಿಷಯ ಸೇರಿಸೋದು ಮೊದಲಿನಿಂದಲೂ ಇದೆ. ಈ ದೇಶದ ಸ್ವಾಭಿಮಾನ, ಶೌರ್ಯದ ಬಗ್ಗೆ ಹೇಳಬೇಕು ಅನ್ನೋದು ನಮ್ಮ ವಾದ. ಮೆಕಾಲೆ ಶಿಕ್ಷಣ ಬಿಟ್ಟು, ಭಾರತದ ಶಿಕ್ಷಣ ಇರಬೇಕು. ಭಾರತದ ಮಕ್ಕಳಿಗೆ, ಮೊಗಲರ ಶಿಕ್ಷಣ, ಟಿಪ್ಪುವಿನ ಶಿಕ್ಷಣ, ಔರಂಗಜೇಬನ ಶಿಕ್ಷಣ ಬೇಕು ಅಂತ ವಾದ ಮಾಡ್ತಿಲ್ಲ. ನಮಗೆ ಬೇಕಿರೋದು ಭಾರತದ ಶಿಕ್ಷಣ. ತಜ್ಞರ ಸಮಿತಿ, ಪಠ್ಯಪುಸ್ತಕ ಸಮಿತಿ ಒಪ್ಪಿದೆ. ಕಾಂಗ್ರೆಸ್ ಹೆಡಗೆವಾರ್ ಕಂಡ್ರೆ ಯಾಕೆ ಭಯ? ಎಂದು ಪ್ರಶ್ನಿಸಿದರು.
ಇಂದು ಹೆಡಗೆವಾರ್ ಪ್ರೇರಣೆಯಿಂದ ದೇಶದ ಪರ ಕೆಲಸ ಕಾರ್ಯ ಮಾಡಲಾಗ್ತಿದೆ. ಹೆಡಗೆವಾರ್ ಪ್ರೇರೇಪಣೆಯಿಂದ ಕೋಟ್ಯಂತರ ಜನ ಕೆಲಸ ಮಾಡ್ತಿದ್ದೇವೆ. ನಮಗೆ ಬದ್ದತೆ ಇದೆ ಎಂದು ತಿರುಗೇಟು ನೀಡಿದರು.
ಚಕ್ರವರ್ತಿ ಸೂಲಿಬೆಲೆ ಅವರ ಲೇಖನ ಪಠ್ಯದಲ್ಲಿ ಸೇರಿಸಿಸುವ ವಿಚಾರವಾಗಿ ಪ್ರತಿಕ್ರಿಯಿಸಿ, ಚಕ್ರವರ್ತಿ ಸೂಲಿಬೆಲೆ ಅವರು ತಾಯಿ ಭಾರತಿಗೆ ವಂದಿಸುವೆ ಅನ್ನೋ ಲೇಖನ ಬರೆದಿದ್ದಾರೆ. ಅದನ್ನು ವಿರೋಧಿಸುವ ಅಗತ್ಯ ಏನಿದೆ. ಸೂಲಿಬೆಲೆ ಬರೆಯಲಿ, ಬೇರೆಯವರೇ ಬರೆಯಲಿ, ವಿಚಾರ ಏನು ಎಂಬುದರ ಮೇಲೆ ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ತಾಯಿ ಭಾರತಿಯನ್ನು ವಂದಿಸ್ತೇನೆ ಅನ್ನೋ ವಿಚಾರ ವಿರೋಧಿಸುವ ವಿಚಾರವೇ?. ತಾಯಿ ಭಾರತಿಯನ್ನು ವಿರೋಧಿಸ್ತೇನೆ ಎಂದರೆ, ನೀವು ಯಾರನ್ನು ವಂದಿಸ್ತೀರಿ ಎಂದು ಪ್ರಶ್ನಿಸಿದರು.
ಓದಿ: ಎಸ್ಎಸ್ಎಲ್ಸಿ ಫಲಿತಾಂಶದ ಬೆನ್ನಲ್ಲೇ ಪಿಯುಸಿ ದಾಖಲಾತಿ ಆರಂಭ: ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ