ಬೆಂಗಳೂರು: ಡಯಾಲಿಸಿಸ್ ಸೇವೆಯಲ್ಲಿನ ಸಮಸ್ಯೆಯನ್ನು ಒಂದು ತಿಂಗಳಲ್ಲಿ ಸರಿಪಡಿಸುವುದಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿಧಾನಸಭೆಗೆ ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಡಿ.ಎಸ್.ಸುರೇಶ್, ತರೀಕೆರೆ ಕ್ಷೇತ್ರದಲ್ಲಿ ಡಯಾಲಿಸಿಸ್ ರೋಗಿಗಳಿಗೆ ಮಾತ್ರೆ, ಇಂಜೆಕ್ಷನ್ ಕೊರತೆ ಇರುವ ಕುರಿತು ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಲಾಗಿತ್ತು. ಒಂದು ಸಂಸ್ಥೆಗೆ 57 ಕೇಂದ್ರ, ಮತ್ತೊಂದು ಸಂಸ್ಥೆಗೆ 114 ತಾಲೂಕುಗಳಲ್ಲಿ ಡಯಾಲಿಸಿಸ್ ಕೇಂದ್ರ ನಿರ್ವಹಿಸುವ ಜವಾಬ್ದಾರಿ ನೀಡಲಾಗಿತ್ತು. ಆದರೆ ಗುತ್ತಿಗೆ ನೀಡಲಾಗಿದ್ದ ಬಿ.ಆರ್.ಶೆಟ್ಟಿ ಸಂಸ್ಥೆ ಆರ್ಥಿಕ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಸೇವೆಯ ಗುಣಮಟ್ಟ ಕಡಿಮೆಯಾಗಿದೆ. ಹಲವೆಡೆ ಸ್ಥಗಿತಗೊಂಡಿದೆ. ಈಗ ಸರ್ಕಾರದ ವತಿಯಿಂದ ಔಷಧಿ ಸರಬರಾಜು ಮಾಡ್ತಿದ್ದೇವೆ. ಸಿಬ್ಬಂದಿಗೂ ನಾವೇ ವೇತನ ಪಾವತಿ ಮಾಡುತ್ತಿದ್ದೇವೆ. ಬಿ.ಆರ್.ಶೆಟ್ಟಿ ಸಂಸ್ಥೆಯ ಗುತ್ತಿಗೆ ಹಿಂಪಡೆದು ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಇದಕ್ಕೆ ದನಿಗೂಡಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಡಯಾಲಿಸಿಸ್ ಸೇವಾ ಯೋಜನೆ ಬಹಳ ಉತ್ತಮ ಕಾರ್ಯಕ್ರಮವಾಗಿದೆ. ಇದು ಬಡವರ ಪರವಾದ ಉತ್ತಮ ಯೋಜನೆ. ಆದರೆ ಆಡಳಿತಾತ್ಮಕವಾದ ಸಮಸ್ಯೆ ನಿರ್ಮಾಣ ಆಗುತ್ತಿದೆ. ಈ ಸಮಸ್ಯೆ ಸರಿ ಮಾಡಬೇಕು ಎಂದು ಸಲಹೆ ನೀಡಿದರು.
ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯಿಸಿ , ಒಂದು ತಿಂಗಳೊಳಗಾಗಿ ಸಮಸ್ಯೆ ಸರಿಪಡಿಸಲಾಗುವುದು. ಈ ಸಂಬಂಧ ಅನೇಕ ಬಾರಿ ಸಭೆ ಕರೆದು ಚರ್ಚೆ ಮಾಡಿದ್ದೇನೆ. ತಾಂತ್ರಿಕ ಹಾಗೂ ಕಾನೂನಾತ್ಮಕ ಸಮಸ್ಯೆ ಇದೆ. ಬಿ.ಆರ್.ಶೆಟ್ಟಿ ಸಂಸ್ಥೆಗೆ ವೇತನ ಮೊತ್ತ ಹಾಕಲಾಗಿತ್ತು. ಆದರೆ, ಸಂಸ್ಥೆಯವರು ಸಿಬ್ಬಂದಿಗೆ ವೇತನ ಪಾವತಿಸಿಲ್ಲ. ಹೀಗಾಗಿ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ ಆಗಸ್ಟ್ ನಿಂದ ನೇರವಾಗಿ ಸಿಬ್ಬಂದಿಗೆ ವೇತನ ಜಮೆ ಮಾಡಲಾಗುತ್ತಿದೆ. ಒಂದು ತಿಂಗಳಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ ಎಂದು ಭರವಸೆ ನೀಡಿದರು.