ಬೆಂಗಳೂರು: ಕಾಂಗ್ರೆಸ್ ಒಡಕು ಅವರ ಜನ್ಮಸಿದ್ಧ ಹಕ್ಕಾಗಿದ್ದು, ಕಾಂಗ್ರೆಸ್ ಒಡಕಿನ ಮನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ನೀಡಿದರು. ಗೃಹ ಕಚೇರಿ ಕೃಷ್ಣದಲ್ಲಿ ಡಿಕೆಶಿ-ಜಮೀರ್ ಜಟಾಪಟಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಒಡಕಿನ ಮನೆಯಾಗಿದೆ. ರಾಜ್ಯದಲ್ಲೂ ಎರಡು ಕಾಂಗ್ರೆಸ್ ಆಗಲಿದೆ. ಡಿಕೆಶಿ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಕಾಂಗ್ರೆಸ್ ಆಗುವ ಮುನ್ಸೂಚನೆ ಕಾಣುತ್ತಿದೆ ಎಂದು ತಿಳಿಸಿದರು.
ಓದಿ: ಮೂರು ದಿನ ಟೆನ್ಷನ್ನಲ್ಲಿದ್ದ ಸಿಎಂ ಇಂದು ಫುಲ್ ಜಾಲಿ ಮೂಡ್ !
ದೇಶದಲ್ಲಿ ನೂರೆಂಟು ಕಾಂಗ್ರೆಸ್ ಇದ್ದು, ಆದಷ್ಟು ಬೇಗ ಕರ್ನಾಟಕದಲ್ಲೂ ಎರಡು ಕಾಂಗ್ರೆಸ್ ಆಗಲಿದೆ. ಸಿದ್ದರಾಮಯ್ಯ ಕಾಂಗ್ರೆಸ್, ಡಿಕೆಶಿ ಕಾಂಗ್ರೆಸ್ ಆಗುವ ಮುನ್ಸೂಚನೆ ಇದೆ. ಕೇವಲ ಅವರು ಅಧಿಕಾರಕ್ಕಾಗಿ ಜೊತೆಗಿದ್ದಾರೆ ಅಷ್ಟೇ. ಆದರೆ ಅವರು ಮಾತ್ರ ಬೇರೆ ಬೇರೆ ಎಂದು ಡಿಕೆಶಿ, ಸಿದ್ದು ಜಗಳಕ್ಕೆ ಟಾಂಗ್ ನೀಡಿದರು.
ನಮ್ಮಲ್ಲಿ ಯಾವುದೇ ಒಡಕು ಇಲ್ಲ, ನಾವೆಲ್ಲರೂ ಒಟ್ಟಾಗಿ ಇದ್ದೇವೆ. ಶಾಸಕರು ಕೂಡ ಸಿಎಂ ಪರ ಇದ್ದಾರೆ. ಈಗಾಗಲೇ ಬಹಿರಂಗ ಹೇಳಿಕೆ ಕೊಟ್ಟವರ ವಿರುದ್ಧ ಶಿಸ್ತು ಕ್ರಮದ ಬಗ್ಗೆ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.
50% ಫಾರ್ಮುಲಾದಲ್ಲಿ ಬಸ್ ಸಂಚಾರಕ್ಕೆ ಸಿದ್ಧತೆ:
ಎರಡನೇ ಹಂತದ ಅನ್ಲಾಕ್ ನಲ್ಲಿ ಬಸ್ಸುಗಳ ಸಂಚಾರ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಶೇಕಡ 50 ಮಾದರಿಯಲ್ಲಿ ಬಸ್ಸುಗಳ ಸಂಚಾರಕ್ಕೆ ಸಿದ್ಧತೆ ಮಾಡಲಾಗಿದೆ. ಇಂದು ಅನ್ಲಾಕ್ ಮೀಟಿಂಗ್ ನಲ್ಲಿ ಸಿಎಂ ಒಪ್ಪಿಗೆ ಕೊಟ್ಟರೆ, ರಾಜ್ಯಾದ್ಯಂತ ಬಸ್ಸುಗಳ ಸಂಚಾರ ಆರಂಭ ಮಾಡುತ್ತೇವೆ ಎಂದರು.
ಸದ್ಯಕ್ಕಂತೂ ಶೇ 50 ರಷ್ಟು ಪ್ರಯಾಣಿಕರ ಪ್ರಯಾಣಕ್ಕೆ ತೀರ್ಮಾನಿಸಲಾಗಿದೆ. ಮುಂದೆ ಲಾಕ್ಡೌನ್ ಮುಗಿದ ನಂತರ ಹಂತ ಹಂತವಾಗಿ ಹೆಚ್ಚುವರಿ ಪ್ರಯಾಣಕ್ಕೆ ಅವಕಾಶ ಮಾಡಿಕೊಡುತ್ತೇವೆ ಎಂದರು.