ಬೆಂಗಳೂರು: ಪಶು ಸಂಗೋಪನೆ ಇಲಾಖೆಯಲ್ಲಿ ವಿವಿಧ ವೃಂದದಲ್ಲಿ ಖಾಲಿಯಿರುವ ಕೆಲಸ ಕೊಡಿಸುವುದಾಗಿ ನಂಬಿಸಿ ಸಚಿವ ಪ್ರಭು ಚವ್ಹಾಣ್ ಹೆಸರಿನಲ್ಲಿ ನಕಲಿ ಸಹಿ ಹಾಗೂ ಸೀಲು ಬಳಸಿ ಹತ್ತಾರು ಜನರಿಂದ ಲಕ್ಷಾಂತರ ರೂಪಾಯಿ ವಂಚಿಸಿದ್ದವನನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ. ಬಾಗಲಕೋಟೆ ಮೂಲದ ಜ್ಞಾನೇಂದ್ರ ಜಾಧವ್ ಬಂಧಿತ ಆರೋಪಿ.
ಈತ 2020ರಿಂದ ಒಂದು ವರ್ಷ ಇಲಾಖೆಯ ಸಚಿವರ ಬಳಿ ಕೆಲಸ ಮಾಡಿದ್ದ. ಅನ್ಯ ಕಾರಣಕ್ಕಾಗಿ ಕೆಲಸ ತೊರೆದಿದ್ದ. ಬಳಿಕ ಊರು ಸೇರಿದ್ದ ಆರೋಪಿ ಪಶುಸಂಗೋಪನೆ ಇಲಾಖೆಯಲ್ಲಿ ಎಫ್ಡಿಎ, ಎಸ್ಡಿಎ ಹಾಗೂ ಡಿ ದರ್ಜೆ ಕೆಲಸ ಖಾಲಿಯಿದ್ದು, ಕೆಲಸ ಕೊಡಿಸುವುದಾಗಿ ನಂಬಿಸಿ ಸುಮಾರು 12 ಜನರಿಂದ 24 ಲಕ್ಷದವರೆಗೆ ಹಣ ಪಡೆದಿದ್ದಾನೆ. ಹಣ ಕೊಟ್ಟವರನ್ನು ನಂಬಿಸಲು ಇಲಾಖೆಯ ಜಾಲತಾಣವನ್ನು ಬಳಸಿಕೊಂಡಿದ್ದ. ಅಲ್ಲದೆ ವಿವಿಧ ಹುದ್ದೆಗಳಿಗೆ ಇಲಾಖೆಯು ನೇಮಕಾತಿ ಅಧಿಸೂಚನೆ ಹೊರಡಿರುವ ಬಗ್ಗೆಯೂ ಗೊತ್ತು ಮಾಡಿಕೊಂಡಿದ್ದ.
ಇದನ್ನೇ ದುರ್ಬಳಕೆ ಮಾಡಿಕೊಂಡು ಪಶುಸಂಗೋಪನೆ ಇಲಾಖೆಯಲ್ಲಿ 93 ವಿವಿಧ ವೃಂದದಲ್ಲಿ ಕೆಲಸ ಖಾಲಿಯಿರುವ ಬಗ್ಗೆ www.ahvs.kar.in ನಕಲಿ ಅಧಿಸೂಚನೆ ಹೊರಡಿಸಿದ್ದ. ವಿಶೇಷ ನೇರ ನೇಮಕಾತಿಯಲ್ಲಿ 63 ಮಂದಿ ನೇಮಕವಾಗಿದ್ದಾರೆ ಎಂದು ತಿಳಿಸಿ ಆಕ್ಷೇಪಣೆ ಸಲ್ಲಿಕೆಗೆ ತಮ್ಮ ಈಮೇಲ್ ಐಡಿ ನೀಡಿದ್ದ. ಅಲ್ಲದೆ ಸಚಿವರ ಹೆಸರಿನಲ್ಲಿ ನಕಲಿ ಸಹಿ, ಸೀಲು ಬಳಸಿ ವಿಧಾನಸೌಧದಲ್ಲಿರುವ ಮುಖ್ಯಮಂತ್ರಿ ಕಚೇರಿಗೂ ನೇಮಕಾತಿ ಅಧಿಸೂಚನೆಯ ನಕಲಿ ಪ್ರತಿ ಕಳುಹಿಸಿ ಹಣ ಕೊಟ್ಟವರನ್ನು ನಂಬಿಸಿದ್ದ.
ವಂಚನೆಗೊಳಗಾದವರು ನೀಡಿದ ಮಾಹಿತಿ ಮೇರೆಗೆ ಇಲಾಖೆ ಅಧಿಕಾರಿಗಳು ದೂರು ನೀಡಿದ್ದರು. ದೂರಿನನ್ವಯ ಜ್ಞಾನೇಂದ್ರ ಜಾಧವ್ನನ್ನು ಬಂಧಿಸಿದ್ದಾರೆ. ಸರ್ಕಾರಿ ವೆಬ್ಸೈಟ್ನ ಲಾಗಿನ್ ಐಡಿ ಹಾಗೂ ಪಾಸ್ವರ್ಡ್ ಕೊಟ್ಟವರು ಯಾರು ಮತ್ತು ಯಾರೆಲ್ಲ ಕೃತ್ಯದ ಹಿಂದಿದ್ದಾರೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಪಿಎಸ್ಐ ನೇಮಕಾತಿ ಅಕ್ರಮ: ಕಲಬುರಗಿಯಲ್ಲಿ ಮತ್ತೆ 8 ಅಭ್ಯರ್ಥಿಗಳ ಬಂಧನ