ಬೆಂಗಳೂರು: ಬೊಮ್ಮನಹಳ್ಳಿ ವಲಯದ ಮಂಗಮ್ಮನಪಾಳ್ಯದಲ್ಲಿ ಈಗಾಗಲೇ 9 ಜನರಲ್ಲಿ ಕೊರೊನಾ ಸೋಂಕು ಕಂಡು ಬಂದ ಹಿನ್ನೆಲೆ ಸೋಂಕು ಪರೀಕ್ಷೆಗೆ ಮುಂದಾದ ಆರೋಗ್ಯ ಅಧಿಕಾರಿಗಳಿಗೆ ಮಂಗಳವಾರ ಹಬ್ಬ ಇದೆ ಎಂಬ ಉತ್ತರ ನೀಡುವ ಮೂಲಕ ಪರೀಕ್ಷೆಗೆ ಒಳಪಡಲು ನಿವಾಸಿಗಳು ನಿರಾಕರಿಸಿದ್ದಾರೆ.
ಕಂಟೇನ್ಮೆಂಟ್ ವಲಯವಾಗಿರುವ ಮಂಗಮ್ಮನಪಾಳ್ಯ ವಾರ್ಡ್ ಜನರ ಕೊರೊನಾ ಸೋಂಕು ಪರೀಕ್ಷೆಗೆ ಬಿಬಿಎಂಪಿ ಇಂದಿನಿಂದ ಸಿದ್ಧತೆ ಮಾಡಿಕೊಂಡಿದ್ದು, ಕಿಯೋಸ್ಕ್ಗಳ ಮೂಲಕ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಮುಂದಾಗಿತ್ತು. ಆದರೆ ಒಬ್ಬರೂ ಕೂಡಾ ಪರೀಕ್ಷೆಗೆ ಮುಂದಾಗಿಲ್ಲ. ಹಬ್ಬ ಇದೆ, ಮಂಗಳವಾರದ ನಂತರ ಬರ್ತೇವೆ ಎಂದು ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ನಾವು ಯಾರನ್ನೂ ಒತ್ತಾಯ ಮಾಡಲು ಆಗುವುದಿಲ್ಲ. ಅವರು ಬಂದ್ರೆ ಗಂಟಲು ದ್ರವ ಸಂಗ್ರಹಿಸಿ ಕೊರೊನಾ ಪರೀಕ್ಷೆ ಮಾಡ್ತೇವೆ ಎಂದು ಬೊಮ್ಮನಹಳ್ಳಿ ವಲಯದ ಆರೋಗ್ಯಾಧಿಕಾರಿ ಡಾ. ಸುರೇಶ್ ತಿಳಿಸಿದ್ದಾರೆ.
ಇತ್ತ ಪಾದರಾಯನಪುರದ ಬಳಿಕ ಹೊಂಗಸಂದ್ರದ ಪಕ್ಕದ ವಾರ್ಡ್ ಮಂಗಮ್ಮನಪಾಳ್ಯ ಸಮುದಾಯದ ಕೊರೊನಾ ಸೋಂಕು ತಪಾಸಣೆಗೆ ಮುಂದಾಗಿದ್ದರು. ಆದ್ರೆ ಜನರೇ ಮುಂದೆ ಬಾರದ ಕಾರಣ ಪರೀಕ್ಷೆ ಮುಂದೂಡಲಾಗಿದೆ.