ಬೆಂಗಳೂರು : ಪಚ್ಚನಾಡಿ ಭೂಭರ್ತಿ ಘಟಕದಲ್ಲಿ ಬಹಳ ವರ್ಷಗಳಿಂದ ಸಂಗ್ರಹವಾಗಿರುವ ಘನ ತ್ಯಾಜ್ಯವನ್ನು ತೆರವುಗೊಳಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಈ ವಿಚಾರವಾಗಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆಲೋಕ್ ಆರಾಧೆ ಹಾಗೂ ನ್ಯಾ.ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠಕ್ಕೆ ಪಾಲಿಕೆ ಈ ಮಾಹಿತಿ ಕೊಟ್ಟಿದೆ.
ಅರ್ಜಿ ವಿಚಾರಣೆ ವೇಳೆ ಪಾಲಿಕೆ ಪರ ಹಾಜರಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಅವರು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಅವರ ಪ್ರಮಾಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಪ್ರಮಾಣಪತ್ರ ದಾಖಲಿಸಿಕೊಂಡಿರುವ ಪೀಠ, ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ.
ಪ್ರಮಾಣಪತ್ರದ ವಿವರ : ಮಾರ್ಚ್ 8ರಂದು ನೀಡಿದ ಒಪ್ಪಿಗೆಪತ್ರ ಆಧರಿಸಿ ಗುತ್ತಿಗೆದಾರರು ಮಾ.11ರಂದು ಬ್ಯಾಂಕ್ ಖಾತರಿ ಒದಗಿಸಿದ್ದಾರೆ. ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರರು ಪ್ರಾಥಮಿಕ ಹಂತದ ಕೆಲಸ ಆರಂಭಿಸಿದ್ದಾರೆ. ಬಹಳ ವರ್ಷಗಳಿಂದ ಸಂಗ್ರಹವಾಗಿರುವ ಘನತ್ಯಾಜ್ಯದ ಜೈವಿಕ ಗಣಿಗಾರಿಕೆ ಮತ್ತು ಜೈವಿಕ ಪರಿಹಾರಕ್ಕೆ ಮೂಲಸೌಕರ್ಯಗಳನ್ನು ಸೃಷ್ಟಿಸಿಕೊಳ್ಳುವುದನ್ನು ಪ್ರಾಥಮಿಕ ಹಂತದ ಕಾಮಗಾರಿ ಒಳಗೊಂಡಿದೆ.
ಇದರಲ್ಲಿ ಮುಖ್ಯವಾಗಿ ಸಿವಿಲ್ ನಿರ್ಮಾಣ ಕಾಮಗಾರಿ, ಯಂತ್ರೋಪಕರಣಗಳ ಪೂರೈಕೆ, ಎಂಐಎಸ್/ಐಟಿ, ವೇ ಬ್ರಿಡ್ಜ್, ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ. ತರಬೇತಿ ಹಾಗೂ ಸಾಮರ್ಥ್ಯ ವೃದ್ಧಿ, ಘಟಕ, ಯಂತ್ರೋಪಕರಣಗಳು, ಸಲಕರಣೆಗಳ ವಾರ್ಷಿಕ ನಿರ್ವಹಣೆ ಒಪ್ಪಂದ ಇತ್ಯಾದಿ ವಿಷಯಗಳನ್ನು ಒಳಗೊಂಡಿದೆ ಎಂದು ಪಾಲಿಕೆ ತಿಳಿಸಿದೆ.
ಯಂತ್ರೋಪಕರಣಗಳನ್ನು ಇಡಲು, ಸೋರಿಕೆ ಸಂಸ್ಕರಣಾ ಘಟಕ ಸ್ಥಾಪಿಸಲು ಹಾಗೂ ಸಂಬಂಧಿಸಿದ ಇತರೆ ಸಿವಿಲ್ ಕಾಮಗಾರಿಗಳಿಗೆ ಸೂಕ್ತವಾಗುವಂತೆ ಭೂಭರ್ತಿ ಜಾಗದ ಒಟ್ಟು 77 ಎಕರೆ ಪ್ರದೇಶವನ್ನು ಗುತ್ತಿಗೆದಾರರು ಸರ್ವೆ ಮಾಡುತ್ತಿದ್ದಾರೆ ಎಂದು ಪಾಲಿಕೆ ಆಯುಕ್ತರು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ. ಕಾಮಗಾರಿ ಪ್ರಗತಿಯ ಫೋಟೋಗಳನ್ನು ಕೂಡ ವರದಿಯೊಂದಿಗೆ ಲಗತ್ತಿಸಲಾಗಿದೆ.
ಇದನ್ನೂ ಓದಿ: ಮಹಿಳೆಯರು-ಮಕ್ಕಳಿಗೆ ಪೌಷ್ಠಿಕ ಆಹಾರ ಪೂರೈಕೆ : ಸರ್ಕಾರದ ಆದೇಶಕ್ಕೆ ತಡೆ ನೀಡಿದ ಹೈಕೋರ್ಟ್