ಬೆಂಗಳೂರು: ನಾವೆಲ್ಲರೂ ಸೋನಿಯಾ ಗಾಂಧಿಯನ್ನು ಬೆಂಬಲಿಸಿದ್ದೇವೆ. ಖರ್ಗೆ ಹೆಸರು ರೇಸ್ನಲ್ಲಿದೆ ಅನ್ನೋದು ಕೇವಲ ಊಹಾಪೋಹ ಎಂದು ಕಾಂಗ್ರೆಸ್ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದರು.
ಸಿಡಬ್ಲ್ಯುಸಿ ಸಭೆಯ ಬಳಿಕ ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಊಹಾಪೋಹದ ಮಾತುಗಳನ್ನ ಸೃಷ್ಟಿಸಬೇಡಿ. ಸೋನಿಯಾ ಬಿಟ್ಟರೆ ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ರಾಹುಲ್ ಗಾಂಧಿಯವರೇ ಮುಂದುವರಿಯುತ್ತಾರೆ. ನಾನು ಇರೋದನ್ನೇ ಇಲ್ಲಿ ಹೇಳಿದ್ದೇನೆ. ಒಳಗೆ ನಡೆದಿರುವುದು ನಿಮಗೆ ಗೊತ್ತಿಲ್ಲ. ನನ್ನ ಹೆಸರು ಬರ್ತಿದೆ ಅನ್ನೋದು ಬೇರೆ ಮಾತು ಎಂದು ತಿಳಿಸಿದರು.
ಸೋನಿಯಾ ಅವರೇ ಮುಂದುವರಿಯಬೇಕು. ನಾನು ಅವರನ್ನೇ ಬೆಂಬಲಿಸಿದ್ದೆ. ಕಾರಣಾಂತರಗಳಿಂದ ನಾವು ಅಧಿಕಾರ ಕಳೆದುಕೊಂಡಿದ್ದೇವೆ. ಅವರೇ ಅಧ್ಯಕ್ಷರಾಗಿ ಮುಂದುವರಿಯಬೇಕು. ಆಗದೆ ಹೋದರೆ ರಾಹುಲ್ ಗಾಂಧಿ ಮುಂದುವರಿಯಬೇಕು. ಇದು ನಾವು ಅವರಿಗೆ ತಿಳಿಸಿದ್ದ ವೈಯುಕ್ತಿಕ ನಿಲುವು ಎಂದರು.
ನಾವು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವಂತೆ ಸೋನಿಯಾ ಅವರಿಗೆ ಮನವಿ ಮಾಡಿದ್ದೆವು. ಒಕ್ಕೊರಲಿನಿಂದ ಅವರನ್ನು ಬೆಂಬಲಿಸಿದ್ದೇವೆ ಎಂದು ಖರ್ಗೆ ಸ್ಪಷ್ಟಪಡಿಸಿದರು.
ಮೋದಿ ಸರ್ಕಾರದ ವಿರುದ್ಧ ಹೋರಾಟಕ್ಕೆ ನಿರ್ಧರಿಸಲಾಗಿದೆ. ಚೀನಾ ಸಂಘರ್ಷ, ನೋಟ್ ಬ್ಯಾನ್ ಇನ್ನಿತರೆ ವಿಚಾರ ದೇಶದ ಮುಂದಿವೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಕಾರ್ಮಿಕ ಸಮಸ್ಯೆಗಳ ಬಗ್ಗೆ ಜನಜಾಗೃತಿ ಮೂಡಿಸುತ್ತೇವೆ ಎಂದು ವಿವರಿಸಿದರು.