ಬೆಂಗಳೂರು: ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದ ನರೇಂದ್ರ ಮೋದಿ ಸರ್ಕಾರ ಪಕೋಡಾ ಮಾರುವುದೂ ಒಂದು ಉದ್ಯೋಗ ಎಂದು ಹೇಳಿದ್ದೇ ದೊಡ್ಡ ಸಾಧನೆ ಎಂದು ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಲೇವಡಿ ಮಾಡಿದ್ದಾರೆ.
ಪ್ರಧಾನಿಯಾಗಿ ಏಳು ವರ್ಷ ಪೂರೈಸಿರುವ ನರೇಂದ್ರ ಮೋದಿ ಅವರ ಕುರಿತು ಟ್ವೀಟ್ ಮಾಡಿರುವ ಮಹದೇವಪ್ಪ, ಯುವ ಜನರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆಂದು ಹೇಳಿ ಪಕೋಡಾ ಮಾರುವುದೂ ಕೂಡಾ ಒಂದು ಉದ್ಯೋಗ ಎಂದು ಹೇಳಿದ್ದೇ ನರೇಂದ್ರ ಮೋದಿ ಅವರ ಸಾಧನೆ ಎಂಬಂತಾಗಿದೆ. ಈಗ ಏರಿಕೆಯಾಗಿರುವ ಅಡುಗೆ ಎಣ್ಣೆಯ ಬೆಲೆಯನ್ನು ನೋಡಿದರೆ ಪಕೋಡಾ ಮಾಡುವುದೂ ಕೂಡಾ ಸಾಧ್ಯವಿಲ್ಲವೇನೋ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ! ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ಅಸ್ತಿತ್ವಕ್ಕೆ ಬಂದು 7 ವರ್ಷಗಳು ಪೂರೈಸಿದ ಸಂಭ್ರಮದಲ್ಲಿದೆ. ರಾಷ್ಟ್ರೀಯ ಬಿಜೆಪಿ ಸರ್ಕಾರದ ದಯನೀಯ ಆಡಳಿತ ವೈಫಲ್ಯದ ಈ ವೇಳೆ ಈ ಸಂಭ್ರಮ ಯಾವ ಕಾರಣಕ್ಕೆಂದು ಸ್ವತಃ ರಾಜ್ಯ ಬಿಜೆಪಿ ಪಕ್ಷದ ಕಾರ್ಯಕರ್ತರಿಗೇ ಗೊತ್ತಿಲ್ಲ! ಜಿಡಿಪಿಯ ಪ್ರಮಾಣವು ದಾಖಲೆ ಮಟ್ಟದಲ್ಲಿ ಕುಸಿತ ಕಂಡು, ದೇಶದ ಎಲ್ಲಾ ಉತ್ಪಾದಕ ವಲಯಗಳು ತತ್ತರಿಸಿ ಹೋದವು. ಇದರ ಪರಿಣಾಮ ಭಾರತವು ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಿಂದಲೇ ಹೊರ ಬೀಳುವಂತಾಯಿತು. ಪ್ರಧಾನಿ ಮೋದಿ ಅವರಿಂದ ಮಾತ್ರವೇ ಇಂತಹ ಸಾಧನೆ ಸಾಧ್ಯ ಎಂದು ಕಾಣುತ್ತದೆ! ಎಂದು ಕಾಲೆಳೆದಿದ್ದಾರೆ.
ಸಂವಿಧಾನಾತ್ಮಕ ಸಂಸ್ಥೆಗಳನ್ನು ತಮ್ಮ ಪಕ್ಷದ ರಾಜಕೀಯ ಏಳಿಗೆಗಾಗಿ ಬಳಸಿಕೊಳ್ಳುವ ಭರದಲ್ಲಿ ಜನ ಸಾಮಾನ್ಯರ ನಂಬಿಕೆಯನ್ನು ಹಾಳು ಮಾಡುತ್ತಿರುವ ಕೇಂದ್ರ ಬಿಜೆಪಿ ಸರ್ಕಾರವು ಹೋರಾಟದ ಮೂಲಕ ಪಡೆದುಕೊಂಡ ಸ್ವತಂತ್ರ ಭಾರತದ ಗಣತಂತ್ರ ವ್ಯವಸ್ಥೆಯಲ್ಲಿ ಶನಿಯಂತೆ ಒಕ್ಕರಿಸಿದೆ! ಅಧಿಕಾರವೆಂಬುದು ಕೇವಲ ಮುಂದಿನ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳಲು ಇರುವ ಅಸ್ತ್ರವೆಂದೇ ನಂಬಿಕೊಂಡು ಇಲ್ಲದ ಹುಚ್ಚಾಟ ಮಾಡುತ್ತಾ ಜನರ ಬದುಕು ಮತ್ತು ಭವಿಷ್ಯವನ್ನು ನಾಶಮಾಡುತ್ತಿರುವ ಕೋಮುವಾದಿ ರಾಜ್ಯ ಬಿಜೆಪಿ ಕೈಗೆ ಕೊಟ್ಟ ಅಧಿಕಾರವು “ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತೆ ಆಗಿದೆ”! ಎಂದಿದ್ದಾರೆ.