ಬೆಂಗಳೂರು: ಮನುವಾದವನ್ನು ಪ್ರತಿಬಿಂಬಿಸುವಂತಹ ಬಹಳಷ್ಟು ಅಂಶಗಳನ್ನು ಹೊಂದಿರುವ ಕೇಂದ್ರ ಬಿಜೆಪಿ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ -2020 ರಲ್ಲಿನ ಬಹುತ್ವ ಮೌಲ್ಯಗಳ ವಿರೋಧಿ ಅಂಶಗಳನ್ನು ತೆಗೆದು ಹಾಕಬೇಕೆಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ನಾಲ್ಕು ಪುಟಗಳ ಸುದೀರ್ಘ ಪತ್ರ ಬರೆದಿರುವ ಅವರು, ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ-2020 ಕ್ಕೆ ಸಂಬಂಧಿಸಿದಂತೆ ಹತ್ತು ಹಲವು ರೀತಿಯ ಗೊಂದಲಗಳು ನನ್ನನ್ನು ಕಾಡುತ್ತಿತ್ತು. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮುಂದೆ ಕೆಲವೊಂದು ವಿಷಯಗಳನ್ನು ಪ್ರಸ್ತಾಪಿಸಲು ಬಯಸುತ್ತೇನೆ. ಇದೀಗ ಭಾರತ ಸರ್ಕಾರವು ಜಾರಿಗೊಳಿಸಲು ಹೊರಟಿರುವ ಹೊಸ ಶಿಕ್ಷಣ ನೀತಿ-2020 ದೇಶದ ಸಂವಿಧಾನಾತ್ಮಕ ಆಶಯಗಳಿಗೆ ಮತ್ತು ಸಾಮಾಜಿಕ ನ್ಯಾಯದ ಕಲ್ಪನೆಗೆ ವ್ಯತಿರಿಕ್ತವಾಗಿದ್ದು, ಶಿಕ್ಷಣದ ಮೂಲಕ ಸಾಧ್ಯವಾಗುವಂತಹ ಸಮೃದ್ಧ ಭಾರತ ನಿರ್ಮಾಣಕ್ಕೆ ಪೂರಕವಾಗಿರದೇ ಮತ್ತೊಮ್ಮೆ ಬಹುತ್ವದ ಮೌಲ್ಯವನ್ನು ನಾಶ ಮಾಡುವ ಕೇಸರೀಕರಣದ ಉದ್ದೇಶವನ್ನು ಜಾರಿಗೊಳಿಸಲು ಹೊರಟಿದೆ. ಬದಲಾವಣೆ ಹೆಸರಿನಲ್ಲಿ ಬರುತ್ತಿರುವ ಈ ಹೊಸ ಶಿಕ್ಷಣ ನೀತಿಯು ಈ ದೇಶದ ಸಂವಿಧಾನಿಕ ಮೌಲ್ಯಗಳಿಗೆ ಅನುಸಾರವಾಗಿ ರೂಪುಗೊಂಡಿರುವ ಶೈಕ್ಷಣಿಕ ಮಾದರಿಯನ್ನು ಹಾಳು ಮಾಡುವ ಮತ್ತು ಮನುವಾದದ ಬಹುತೇಕ ರೀತಿ ನೀತಿಗಳನ್ನು ಶಿಕ್ಷಣ ವ್ಯವಸ್ಥೆಯ ಮೂಲಕ ಮಕ್ಕಳಲ್ಲಿ ಸೇರಿಸಲು ಮಾಡುತ್ತಿರುವಂತಹ ಹುನ್ನಾರವಾಗಿದೆ ಎಂದಿದ್ದಾರೆ.
ಸಂವಿಧಾನ ವಿರೋಧಿ ಉದ್ದೇಶ:
ಶಿಕ್ಷಣ ವ್ಯವಸ್ಥೆಯಲ್ಲಿ ಮಾಡಲು ಹೊರಟಿರುವ ಈ ಮಾರ್ಪಾಡುಗಳ ಬಗ್ಗೆ ಕೇಳಿದರೆ, ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಕಾಲ ಕಾಲಕ್ಕೆ ಬದಲಿಸುತ್ತಿದ್ದು, ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ವಿಧಾನಗಳನ್ನು ಅಳವಡಿಸುವುದಕ್ಕೆ ಪೂರಕವಾಗಿ ಈಗ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿದ್ದೇವೆ ಎಂಬ ಮಾತನ್ನು ಸರ್ಕಾರ ಹೇಳುತ್ತಿದೆ. ಆದರೆ ಈ ಹಿಂದಿನ ಬದಲಾವಣೆಗಳು ಮತ್ತು ಈಗಿನ ಬದಲಾವಣೆಯ ಸ್ವರೂಪವನ್ನು ಗಮನಿಸುತ್ತಿದ್ದರೆ, ಇದು ನಿಜಕ್ಕೂ ಎಲ್ಲರೂ ಆತಂಕ ಪಡಬೇಕಾದಂತಹ ಸಂವಿಧಾನ ವಿರೋಧಿ ಉದ್ದೇಶವನ್ನು ಒಳಗೊಂಡಿದೆ. ದೇಶದ ಎಲ್ಲಾ ವರ್ಗದ ಮಕ್ಕಳ ಭವಿಷ್ಯಕ್ಕೆ ಉತ್ತಮ ಅಡಿಪಾಯ ಹಾಕುವಂತಹ ಶಿಕ್ಷಣ ವ್ಯವಸ್ಥೆಯ ನೀತಿಯಲ್ಲಿ ಈ ಹಿಂದೆ ಉಂಟಾಗಿರುವ ಬದಲಾವಣೆಗಳು ಮತ್ತೆ ಅದರ ಉದ್ದೇಶವನ್ನು ನಾವು ಗಮನಿಸುವುದಾದರೆ ಈ ಕೆಳಕಾಣಿಸಿದ ಅಂಶಗಳನ್ನು ಪರಿಗಣಿಸಬಹುದು ಎಂದು ಕೆಲ ವಿವರವನ್ನು ವಿಸ್ತೃತವಾಗಿ ನೀಡುವ ಕಾರ್ಯ ಮಾಡಿದ್ದಾರೆ.
ಪರಿಷತ್ ಸದಸ್ಯರು ಯಾರು?:
ಕೇಂದ್ರ ಸರ್ಕಾರವು ರಾಷ್ಟ್ರೀಯ ಅಧ್ಯಾಪಕ ಶಿಕ್ಷಣ ಪರಿಷತ್ತಿನ ನಿಯಂತ್ರಣ ಅಧ್ಯಾಪಕರ ರಾಷ್ಟ್ರೀಯ ವೃತ್ತಿ ಮಾನದಂಡಗಳನ್ನು ರೂಪಿಸುವ ಜವಾಬ್ದಾರಿಯನ್ನು ನೀಡಲಾಗಿದ್ದು, ಈ ಪರಿಷತ್ತಿನ ಸದಸ್ಯರು ಯಾರು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಹೀಗೆ ಅಸ್ಪಷ್ಟವಾಗಿರುವ ಸಂಗತಿಗಳನ್ನೇ ಮುಂದಿಟ್ಟುಕೊಂಡು ಶಿಕ್ಷಣ ವ್ಯವಸ್ಥೆಯ ನಿಯಂತ್ರಣ ವ್ಯವಸ್ಥೆಯನ್ನು ರೂಪಿಸುವುದು ನಿಜಕ್ಕೂ ತರವಲ್ಲ ಎಂಬುದು ನನ್ನ ಅಭಿಪ್ರಾಯವಾಗಿದೆ. ಅಪಾಯಕಾರಿ ಎಂಬಂತೆ ಆರ್ ಎಸ್ ಎಸ್ ನ ಮೂಲದ ಶಿಕ್ಷಣ ಸಂಸ್ಥೆಗಳಾದ ರಾಷ್ಟೋತ್ಥಾನ ಪರಿಷತ್ತಿನ ಶಿಕ್ಷಕರು ಮತ್ತು ಅದರ ಮುಖ್ಯಸ್ಥರುಗಳು ನಿಯಮಿತವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯ ಚರ್ಚೆಯಲ್ಲಿ ತೊಡಗಿ ತಮ್ಮ ಸಲಹೆಗಳನ್ನು ಸರ್ಕಾರಕ್ಕೆ ನೀಡುತ್ತಿದ್ದಾರೆಂಬ ಮಾಹಿತಿ ಇದ್ದು, ಇದು ಬಹುತ್ವವನ್ನು ನಾಶ ಮಾಡುವ ಹಿಂದುತ್ವದ ಬೀಜಗಳನ್ನು ಶಿಕ್ಷಣ ವ್ಯವಸ್ಥೆಯ ಮೂಲಕ ಜಾರಿಗೊಳಿಸುವ ಕೇಂದ್ರ ಸರ್ಕಾರದ ಅಪಾಯಕಾರಿ ಪ್ರಯತ್ನವಾಗಿ ನನಗೆ ಕಾಣುತ್ತಿದೆ ಎಂದಿದ್ದಾರೆ.
ಒಟ್ಟಾರೆಯಾಗಿ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ 2020 ನಿಜಕ್ಕೂ ಪ್ರಜಾಪ್ರಭುತ್ವದ ಅಡಿಯಲ್ಲಿರುವ ಶಿಕ್ಷಣ ವ್ಯವಸ್ಥೆವನ್ನು ದುರ್ಬಲಗೊಳಿಸುವ ಮತ್ತು ಮೌಲ್ಯ, ಕೋಮುವಾದದ ಬೀಜಗಳನ್ನು ಶಿಕ್ಷಣ ವ್ಯವಸ್ಥೆಯ ಮೂಲಕ ಭವಿಷ್ಯದ ಮಕ್ಕಳಲ್ಲಿ ಗಟ್ಟಿಗೊಳಿಸಲು ಹೊರಟಿರುವ ಸರ್ಕಾರದ ಹುನ್ನಾರವಾಗಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಅಳವಡಿಸಲು ಹೊರಟಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಹುತ್ವವನ್ನು ಪಾಠ ಮಾಡುವಂತೆ ಮತ್ತು ಏಕಮೇವ ಸಿದ್ಧಾಂತವನ್ನು ಬಲವಂತವಾಗಿ ಹೇರುವಂತಹ ಸಂಗತಿಗಳಿಗೆ ಕಡಿವಾಣ ಹಾಕಬೇಕೆಂದು ಈ ಮೂಲಕ ಆಗ್ರಹಿಸುತ್ತೇನೆ ಎಂದು ಮಹದೇವಪ್ಪ ಪತ್ರದಲ್ಲಿ ವಿವರಿಸಿದ್ದಾರೆ.