ಬೆಂಗಳೂರು: ಮಗುವನ್ನ ದತ್ತು ಪಡೆದ ಹಾಗೂ ಪಡೆಯುವ ಸರ್ಕಾರಿ ನೌಕರರಿಗೂ ಪಿತೃತ್ವ, ಮಾತೃತ್ವ ರಜೆ ಸಿಗಲಿದೆ. ಹೌದು, ರಾಜ್ಯ ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗಿರುವ ಅವಕಾಶ ಇನ್ನು ಮುಂದೆ ದತ್ತು ಪಡೆಯುವ ನೌಕರರಿಗೂ ಸಿಗಲಿದೆ.
ಪುರುಷ ನೌಕರರಿಗೆ ಪತ್ನಿಯ ಹೆರಿಗೆ ಪ್ರಾರಂಭದಲ್ಲಿ 15 ದಿನಗಳ ಕಾಲ ಪಿತೃತ್ವ ರಜೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದೇ ಮಾದರಿಯ ಸೌಲಭ್ಯವನ್ನು ದತ್ತು ಪಡೆಯುವ ರಾಜ್ಯ ಸರ್ಕಾರಿ ನೌಕರರಿಗೂ ಸಹ ಮಾತೃತ್ವ ಮತ್ತು ಪಿತೃತ್ವ ರಜೆಯ ಸೌಲಭ್ಯ ಸಿಗಲಿದೆ.
ಮಹಿಳೆಯರಿಗೆ 180 ದಿನ ಮಾತೃತ್ವ ರಜೆ ಹಾಗೂ ಪುರಷರಿಗೆ ಪಿತೃತ್ವ ಯೋಜನೆಯಡಿ 15 ದಿನ ರಜೆ ಸಿಗಲಿದೆ. ಮಗುವನ್ನ ದತ್ತು ಪಡೆದ ದಿನದಿಂದ ರಜೆ ಅನ್ವಯವಾಗಲಿದ್ದು, ಸರ್ಕಾರದ ನಿಯಮದ ಪ್ರಕಾರ ಎರಡು ಮಕ್ಕಳು ಮಾತ್ರ ಇರಬೇಕು. ಮೂರನೇ ಮಗುವನ್ನ ದತ್ತು ಪಡೆದರೆ ರಜೆ ಅನ್ವಯವಾಗುವುದಿಲ್ಲ ಎಂದು ಆದೇಶಿಸಲಾಗಿದೆ.