ಬೆಂಗಳೂರು: ರಾಜ್ಯದಲ್ಲಿನ ಕಾರಾಗೃಹಗಳಲ್ಲಿ ಮೂಲಸೌಕರ್ಯಗಳ ಕೊರತೆ ಕುರಿತು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ವರದಿಯ ಪ್ರತಿಯೊಂದು ಅಂಶಕ್ಕೂ ವಿಸ್ತೃತವಾದ ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ರಾಜ್ಯದ ಕಾರಾಗೃಹಗಳಲ್ಲಿನ ಮೂಲಸೌಕರ್ಯ ಕೊರತೆ ಸಂಬಂಧ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ದಾಖಲಿಸಿರುವ ಸಾರ್ವನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ, ಕಾನೂನು ಸೇವಾ ಪ್ರಾಧಿಕಾರ ಮತ್ತು ಸರ್ಕಾರದ ವಾದ ಆಲಿಸಿದ ಪೀಠ, ಪ್ರಾಧಿಕಾರದ ವರದಿಯಲ್ಲಿ ಕಾರಾಗೃಹಗಳಲ್ಲಿ ಮೂಲ ಸೌಕರ್ಯದ ಕೊರತೆ ಸೇರಿ ಹಲವು ನ್ಯೂನತೆಗಳನ್ನು ಪಟ್ಟಿ ಮಾಡಲಾಗಿದೆ. ಆ ಪ್ರತಿಯೊಂದು ಅಂಶಗಳಿಗೂ ಉತ್ತರ ಒಳಗೊಂಡ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಸೆ.27ಕ್ಕೆ ಮುಂದೂಡಿತು.
ಅಲ್ಲದೆ, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಜೈಲುಗಳಲ್ಲಿನ ಕೈದಿಗಳ ದಟ್ಟಣೆ, ಹಿಂಸಾಚಾರ, ಕಾರಾಗೃಹ ಸಿಬ್ಬಂದಿ ಕೊರತೆ ಮತ್ತಿತರ ಪ್ರಮುಖ ವಿಚಾರಗಳ ಬಗ್ಗೆ ಪರಿಶೀಲಿಸಲು ಸುಪ್ರೀಂ ಕೋರ್ಟ್, ನಿವೃತ್ತ ನ್ಯಾಯಮೂರ್ತಿ ಅಮಿತಾಬ್ ರಾಯ್ ನೇತೃತ್ವದಲ್ಲಿ ಉನ್ನತ ಸಮಿತಿ ರಚಿಸಿದೆ. ಅದು ರಾಜ್ಯಗಳಿಂದ ಮಾಹಿತಿ ತರಿಸಿಕೊಂಡು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂಬ ಅಂಶವನ್ನೂ ಪೀಠ ದಾಖಲಿಸಿತು.
ಕಾನೂನು ಸೇವಾ ಪ್ರಾಧಿಕಾರದ ಪರ ವಾದ ಮಂಡಿಸಿದ ನ್ಯಾಯವಾದಿ ಶ್ರೀಧರ್ ಪ್ರಭು, ರಾಜ್ಯದ 48 ಕೇಂದ್ರ ಕಾರಾಗೃಹ ಹಾಗೂ ಉಪಬಂಧಿಖಾನೆಗಳಿಗೆ ಭೇಟಿ ನೀಡಿ ವಸ್ತು ಸ್ಥಿತಿ ಪರಿಶೀಲಿಸಿ ಪ್ರಾಧಿಕಾರ ಸಮಗ್ರ ವರದಿ ಸಲ್ಲಿಸಿದೆ. ಕೈದಿಗಳನ್ನು ಭೇಟಿ ಮಾಡಲು ಕುಟುಂಬದವರಿಗೆ ಪ್ರತ್ಯೇಕ ಸ್ಥಳಾವಕಾಶವಿಲ್ಲ, ಇ- ಮುಲಾಖತ್ ವ್ಯವಸ್ಥೆ ಸರಿಯಿಲ್ಲ, ಕಾರಾಗೃಹಗಳಲ್ಲಿ ಪ್ರತ್ಯೇಕ ಶೌಚಾಲಯಗಳಿಲ್ಲ, ಹಲವು ಉಪ ಬಂಧಿಖಾನೆಗಳಲ್ಲಿ ಕೈದಿಗಳಿಗೆ ಊಟ ನೀಡುವುದನ್ನು ಹೊರಗುತ್ತಿಗೆ ನೀಡುತ್ತಿರುವುದು ಸೇರಿ ಹಲವು ನ್ಯೂನತೆಗಳನ್ನು ವಿವರಿಸಲಾಗಿದೆ. ಅದಕ್ಕೆ ಸರ್ಕಾರ ಸೂಕ್ತ ವಿವರಣೆ ನೀಡಬೇಕು ಎಂದರು.
ಸರ್ಕಾರಿ ವಕೀಲರು, ಕಳೆದ ವಿಚಾರಣೆ ವೇಳೆ ಸಂಕ್ಷಿಪ್ತ ವರದಿಯನ್ನು ಸಲ್ಲಿಸಲಾಗಿತ್ತು. ಆ ಕುರಿತು ಮುಂದಿನ ವಿಚಾರಣೆ ವೇಳೆಗೆ ಸಮಗ್ರ ಉತ್ತರ ಸಲ್ಲಿಸಲಾಗುವುದು ಎಂದು ತಿಳಿಸಿದರು.