ಬೆಂಗಳೂರು: ದಾವಣಗೆರೆಯಲ್ಲಿ ಇಂದು ನಡೆಯುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಾರಂಭಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳನ್ನು ಎರವಲು ಸೇವೆಗೆ ನೀಡಿದ್ದು, ಇದರಿಂದ ಇಂದು ನಗರದಲ್ಲಿ ಬಸ್ ಪ್ರಯಾಣಿಕರಿಗೆ ತೊಂದರೆ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.
ನಿನ್ನೆ ಮಧ್ಯಾಹ್ನವೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 700ಕ್ಕೂ ಹೆಚ್ಚು ಬಸ್ಸುಗಳು ದಾವಣಗೆರೆಯತ್ತ ಸಿದ್ದರಾಮಯ್ಯ ಅಭಿಮಾನಿಗಳನ್ನ ಕರೆದುಕೊಂಡು ತೆರಳಿದೆ. ಸಮಾರಂಭದ ಆಯೋಜಕರು ಈ ಬಸ್ಗಳನ್ನು ಗುತ್ತಿಗೆ ರೂಪದಲ್ಲಿ ಪಡೆದಿದ್ದು, ಇಂದು ರಾತ್ರಿ ವೇಳೆಗೆ ವಾಪಸ್ ಆಗಲಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ನಗರ ಕೇಂದ್ರದಿಂದ ವಿವಿಧ ಜಿಲ್ಲಾ ಕೇಂದ್ರಗಳಿಗೆ ತೆರಳುವ ಪ್ರಯಾಣಿಕರಿಗೆ ಇಂದು ಬಸ್ ಲಭ್ಯತೆ ಸಮರ್ಪಕವಾಗಿ ಸಿಗುವ ಸಾಧ್ಯತೆ ಕಡಿಮೆ ಇದೆ.
ನಿನ್ನೆ ಮಧ್ಯಾಹ್ನವೇ ಬಹುತೇಕ ಬಸ್ಗಳು ದಾವಣಗೆರೆಯತ್ತ ಪ್ರಯಾಣ ಬೆಳೆಸಿದ್ದರಿಂದ ಬೆಂಗಳೂರಿನಿಂದ ವಿವಿಧ ಜಿಲ್ಲೆಗಳು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಭಾಗಗಳಿಗೆ ತೆರಳುವ ಪ್ರಯಾಣಿಕರಿಗೆ ಬಸ್ಗಳ ಕೊರತೆ ಎದುರಾಗಿತ್ತು. ಮಧ್ಯಾಹ್ನದ ನಂತರ ಹಲವಡೆಗಳಿಗೆ ಬಸ್ ಸಂಪರ್ಕ ಲಭಿಸಲಿಲ್ಲ. ಇದೇ ಸ್ಥಿತಿ ಇಂದು ಸಹ ಮುಂದುವರೆಯಲಿದ್ದು, ಬಸ್ಗಳನ್ನೇ ಅವಲಂಬಿಸಿರುವ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುವುದು ಶತಸಿದ್ಧ.
ಸಿದ್ದರಾಮಯ್ಯಗೆ 75 ವರ್ಷ ತುಂಬುತ್ತಿರುವ ಹಿನ್ನೆಲೆ ಇಂದು ಅವರ ಅಭಿಮಾನಿಗಳು ದಾವಣಗೆರೆಯಲ್ಲಿ ಅಮೃತ ಮಹೋತ್ಸವ ಸಮಾರಂಭವನ್ನು ಆಯೋಜಿಸಿದ್ದು, ಸರಿಸುಮಾರು ಎರಡರಿಂದ ಮೂರು ಲಕ್ಷ ಜನರನ್ನ ಸೇರಿಸುವ ಗುರಿ ಹೊಂದಿದ್ದಾರೆ. ಸಿದ್ದರಾಮಯ್ಯ ತವರು ಜಿಲ್ಲೆ, ಮೈಸೂರು ಹಾಗೂ ಕರ್ಮಭೂಮಿ ಬೆಂಗಳೂರಿನಿಂದ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ತೆರಳಿದ್ದಾರೆ.
ಹಳೆ ಮೈಸೂರು ಭಾಗದಿಂದಲೇ ಸಾಕಷ್ಟು ದೊಡ್ಡ ಸಂಖ್ಯೆಯ ಅಭಿಮಾನಿಗಳು ತೆರಳುತ್ತಿರುವ ಹಿನ್ನೆಲೆ ಬೆಂಗಳೂರು ನಗರದಿಂದ ಹಾಗೂ ಹಳೆ ಮೈಸೂರು ಭಾಗದ ವಿವಿಧ ಜಿಲ್ಲೆಗಳಿಂದ ಹೆಚ್ಚುವರಿ ಬಸ್ಗಳನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಎರವಲು ಪಡೆಯಲಾಗಿದೆ.
ಒಟ್ಟು ಏಳು ಸಾವಿರ ಬಸ್ಗಳನ್ನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹೊಂದಿದ್ದು, ರಾಜ್ಯದ ವಿವಿಧ ಭಾಗಗಳಿಗೆ ನಿತ್ಯ ಕಾಲಕಾಲಕ್ಕೆ ಬಸ್ಗಳು ತೆರಳುತ್ತಿರುತ್ತವೆ. ಆದರೆ ಇದೀಗ ಶೇಕಡ ಹತ್ತರಷ್ಟು ಬಸ್ಗಳ ಕೊರತೆ ಎದುರಾಗುತ್ತಿದ್ದು, ಒಂದಿಷ್ಟು ಕಡೆ ಬಸ್ಗಳ ಸಂಚಾರದಲ್ಲಿ ವ್ಯತ್ಯಾಸ ಉಂಟಾಗಲಿದ್ದು, ಇದನ್ನು ಸಂಸ್ಥೆ ಯಾವ ರೀತಿ ಸರಿದೂಗಿಸಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
ಕೆಎಸ್ಆರ್ಟಿಸಿ ಸಂಚಾರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದು, ಎರವಲು ಸೇವೆಗೆ ಬಸ್ಗಳನ್ನ ನೀಡಿರುವುದರಿಂದ ನಗರ ಕೇಂದ್ರದಿಂದ ರಾಜ್ಯದ ವಿವಿಧ ಭಾಗಗಳಿಗೆ ಹಾಗೂ ಹಳೆ ಮೈಸೂರು ಭಾಗದ ವಿವಿಧ ಜಿಲ್ಲೆಗಳಿಗೆ ಪರಸ್ಪರ ಸಂಪರ್ಕ ಕಲ್ಪಿಸುವ ಬಸ್ಗಳ ಸೇವೆಯಲ್ಲಿ ಒಂದಿಷ್ಟು ವ್ಯತ್ಯಯ ಆಗಲಿದೆ.
ವಾರದ ದಿನ ಆಗಿರುವ ಹಿನ್ನೆಲೆ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನ ಸಂಚಾರ ಇರುವುದಿಲ್ಲ. ಸಾಧ್ಯವಾದಷ್ಟು ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದ ರೀತಿ ಬಸ್ಗಳನ್ನ ವ್ಯವಸ್ಥೆ ಮಾಡುತ್ತೇವೆ. ಅಗತ್ಯ ಪ್ರಮಾಣದ ಬಸ್ ಗಳು ನಮ್ಮ ಬಳಿ ಇವೆ. ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ತೊಂದರೆಗಳು ಎದುರಾದ ಹಿನ್ನೆಲೆ ಸಂಸ್ಥೆ ಆರ್ಥಿಕವಾಗಿ ಸಾಕಷ್ಟು ಬಳಲಿದೆ. ಈ ರೀತಿ ಎರವಲು ಸೇವೆ ಮೂಲಕ ಬರುವ ಆದಾಯ ಸಂಸ್ಥೆಯನ್ನು ಒಂದಿಷ್ಟು ಉಸಿರಾಡುವಂತೆ ಮಾಡಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಓದಿ: ಅವರೇ ಸಾಕಿದ ಆ ಸಂಘಟನೆಗಳನ್ನು ಅವರೇ ಕಿತ್ತು ಹಾಕಲಿ: ಸಿದ್ದರಾಮಯ್ಯ ಸವಾಲು