ಬೆಂಗಳೂರು: ಈಗ ಒಂದು ದೇಶ, ಒಂದು ಚುನಾವಣೆ ಅಂತಿದ್ದಾರೆ. ಇದನ್ನ ಯಾರ ಒತ್ತಡದ ಮೇಲೆ ಈ ಚರ್ಚೆಗೆ ತರಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆಯ ನಂತರ ಮಾತನಾಡಿದ ಅವರು, ಒಂದು ದೇಶ, ಒಂದು ಚುನಾವಣೆ ಬಗ್ಗೆ ಚರ್ಚೆಯಿದೆ. ಈ ಬಗ್ಗೆ ಚರ್ಚೆಗೆ ಯಾರು ಅವಕಾಶ ಕೊಟ್ಟಿದ್ದು, ಕೇಂದ್ರ ಸರ್ಕಾರವೇನಾದ್ರೂ ಇದನ್ನ ಮಾಡಿ ಎಂದಿದ್ಯಾ? ಇವತ್ತು ರಾಜ್ಯದಲ್ಲಿ ಏನೇನು ಸಮಸ್ಯೆಯಿದೆ. ಈ ಸಮಸ್ಯೆಗಳ ಬಗ್ಗೆ ಯಾಕೆ ಚರ್ಚೆ ಮಾಡಬಾರದು? ಎಂದು ಪ್ರಶ್ನಿಸಿದರು.
ದುಡ್ಡು ಕೊಟ್ಟು ಎಂಎಲ್ಎ ಖರೀದಿ ಮಾಡಿದ್ದಾರೆ. ಇವರಿಗೆ ಇನ್ಯಾವ ಮೌಲ್ಯವಿದೆ. ಇದರ ಬಗ್ಗೆ ಸಿಎಲ್ಪಿ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಇದನ್ನ ನಾವು ವಿರೋಧಿಸುತ್ತಿದ್ದೇವೆ ಎಂದು ಸ್ಪೀಕರ್ ನಡೆಗೆ ಬೇಸರ ವ್ಯಕ್ತಪಡಿಸಿದರು.
ಬಿಜೆಪಿಯವರು ತಮ್ಮ ಪಕ್ಷದ ರಾಜಕೀಯ ಅಜೆಂಡಾವನ್ನು ಚರ್ಚೆಗೆ ತರಲು ಮುಂದಾಗಿದ್ದಾರೆ. ಒನ್ ನೇಷನ್, ಒನ್ ಎಲೆಕ್ಷನ್ ಚರ್ಚೆಯನ್ನ ವಿರೋಧಿಸಲು ಸಿಎಲ್ಪಿ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ ಎಂದರು.
ಸದನದಲ್ಲಿ ಲಿಮಿಟ್ ಆಗಿ ಮಾತಾಡಬೇಕು ಅಂತ ಕಾರ್ಯದರ್ಶಿ ಹತ್ತಿರ ಪತ್ರ ಕಳುಹಿಸಿದ್ದಾರೆ. ನಾವು ರಾಜಕಾರಣ ಮಾಡೋಕೆ ಬಂದಿರೋದು, ಚರ್ಚೆಗೆ ಎಷ್ಟು ವಿಷಯ ಇದೆ. ರಾಜ್ಯದಲ್ಲಿ ಏನೆಲ್ಲಾ ನಡೆಯುತ್ತಿದೆ. ಇದರ ಬಗ್ಗೆ ಚರ್ಚೆ ಮಾಡುವುದು ಬೇಡವಾ? ಚರ್ಚೆಗೆ ಲಿಮಿಟ್ ಹಾಕೋಕೆ ಹೊರಟಿದ್ದಾರೆ. ಶಾಸಕರ ಚರ್ಚೆಗೆ ಲಿಮಿಟ್ ಹಾಕೋಕೆ ಇವರು ಯಾರು? ಎಂದು ಕಿಡಿಕಾರಿದ್ದಾರೆ.