ಬೆಂಗಳೂರು: ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ 59 ಚೀನಾ ಮೂಲದ ಆ್ಯಪ್ಗಳನ್ನು ಬ್ಯಾನ್ ಮಾಡಿದೆ. ಈ ನಡುವೆ ಸ್ವದೇಶಿ ಆ್ಯಪ್ಗಳು ಈಗ ಹೆಚ್ಚು ಮನ್ನಣೆ ಪಡೆಯುತ್ತಿವೆ. ಅವುಗಳಲ್ಲಿ 'ಕೂ' ಎಂಬ ಆ್ಯಪ್ ಈಗ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ.
ಸಂಪೂರ್ಣ ಕನ್ನಡ ಭಾಷೆಯಲ್ಲಿ ವ್ಯವಹರಿಸುತ್ತಿರುವುದು ಈ ಆ್ಯಪ್ನ ವಿಶೇಷವಾಗಿದೆ. ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಆಂಗ್ಲ ಭಾಷೆಯೇ ಪ್ರಮುಖವಾಗಿದೆ. ಆದರೆ ಮೊದಲ ಬಾರಿಗೆ ಸ್ವದೇಶಿ ಆ್ಯಪ್ ಅದರಲ್ಲೂ ನಮ್ಮ ಕನ್ನಡದವರೇ ತಯಾರಿಸಿಸುವ ಆ್ಯಪ್ ಕನ್ನಡದಲ್ಲಿ ಲಭ್ಯವಿದೆ. ಅಪ್ರಮೇಯ ರಾಧಾಕೃಷ್ಣ ಎಂಬುವವರು ಈ ಆ್ಯಪ್ ಸಂಸ್ಥಾಪಕರು.
ಜನರು ತಮ್ಮ ಆಲೋಚನೆ, ಅಭಿಪ್ರಾಯ, ದೈನಂದಿನ ವಿಚಾರಗಳು ಎಲ್ಲವನ್ನೂ ಈ ಆ್ಯಪ್ ಮೂಲಕ ಕನ್ನಡದಲ್ಲೇ ವಿನಿಮಯ ಮಾಡಿಕೊಳ್ಳಬಹುದು. 'ಕೂ' ಆ್ಯಪ್ ಟ್ವಿಟ್ಟರ್, ಫೇಸ್ಬುಕ್ ಮಾದರಿಯಲ್ಲೇ ಕೆಲಸ ಮಾಡಲಿದೆ. ಸಾಕಷ್ಟು ಜನರು ಈಗಾಗಲೇ 'ಕೂ' ಆ್ಯಪ್ ಬಳಸುತ್ತಿದ್ದು, ಕನ್ನಡ ಭಾಷೆಯಲ್ಲಿರುವ ಕಾರಣ ಸಂತೋಷ ವ್ಯಕ್ತಪಡಿಸಿದ್ದಾರೆ. ಯಾರೇ ಆಗಲಿ ತಮ್ಮ ಮಾತೃಭಾಷೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಬಯಸುತ್ತಾರೆ. ಇದಕ್ಕೆ 'ಕೂ' ಆ್ಯಪ್ ಅವಕಾಶ ಮಾಡಿಕೊಟ್ಟಿದೆ.
ಮಾರ್ಚ್ ತಿಂಗಳಲ್ಲಿ ಈ ಕೂ ಆ್ಯಪ್ ಬಿಡುಗಡೆ ಆಗಿದೆ. ಮಾನ್ಯ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ, ಕ್ರಿಕೆಟಿಗ ಅನಿಲ್‌ಕುಂಬ್ಳೆ, ಜಾವಗಲ್ ಶ್ರೀನಾಥ್, ಪೊಲೀಸ್ ಉಪ ಆಯುಕ್ತರು ಸೇರಿದಂತೆ ರಾಜಕೀಯ, ಕ್ರೀಡೆ, ಸಿನಿಮಾ, ಪತ್ರಕರ್ತರು, ಅಧಿಕಾರಿಗಳು, ಸಾಹಿತಿಗಳು ಸೇರಿದಂತೆ ಎಲ್ಲಾ ವರ್ಗದ ಜನರು ಈಗಾಗಲೇ ಈ 'ಕೂ' ಆ್ಯಪ್‌ನಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಪ್ರಸ್ತುತ ಕರ್ನಾಟಕದಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ಈ ಆ್ಯಪ್ ಬಳಸುತ್ತಿದ್ದು ಇದನ್ನು ಬಹಳ ಮೆಚ್ಚಿದ್ದಾರೆ.
ನಿಮ್ಮಇಷ್ಟದ ವ್ಯಕ್ತಿಗಳನ್ನು 'ಕೂ' ಆ್ಯಪ್‌ನಲ್ಲಿ ಫಾಲೋ ಮಾಡಲು ಅವಕಾಶವಿದೆ. ಕೆಪಿಎಂಜಿ ಹಾಗೂ ಗೂಗಲ್ ನಡೆಸಿದ ಅಧ್ಯಯನದ ಪ್ರಕಾರ 2021 ರ ವೇಳೆಗೆ ಪ್ರಾದೇಶಿಕ ಭಾಷೆ ಬಳಕೆದಾರರು ದೇಶದ ಅಂತರ್ಜಾಲ ಬಳಕೆಯ ಪೈಕಿ ಶೇಕಡಾ 75 ರಷ್ಟು ಹೆಚ್ಚಾಗಲಿದ್ದಾರೆ ಎನ್ನಲಾಗಿದೆ. ಆ ವೇಳೆಗೆ ಈ 'ಕೂ' ಆ್ಯಪ್ ಇನ್ನೂ ಹೆಚ್ಚು ಜನಕ್ಕೆ ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ಇತರ ಭಾಷೆಗಳಲ್ಲಿ ಕೂಡಾ ಈ ಆ್ಯಪ್ ಬಿಡುಗಡೆಯಾಗಲಿದ್ದು ಆಯಾ ರಾಜ್ಯದ ಜನರು ತಮ್ಮ ಮಾತೃಭಾಷೆಯಲ್ಲಿ ಈ ಆ್ಯಪ್ ಬಳಸಬಹುದು.